ಮೋದಿ ಜನ್ಮದಿನ "ರಾಷ್ಟ್ರೀಯ ನಿರುದ್ಯೋಗ ದಿನ" ಆಚರಿಸಲು ಕಾಂಗ್ರೆಸ್ ನಿರ್ಧಾರ

ಗುರುವಾರ, 16 ಸೆಪ್ಟಂಬರ್ 2021 (08:59 IST)
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟಂಬರ್ 17 ಅನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ.

ಜೊತೆಗೆ ದೇಶಾದ್ಯಂತ ಬೃಹತ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ. ಆದರೆ, ಮೋದಿ ಅವರ ಆಡಳಿತದಲ್ಲಿ ಯುವಕರು ಉದ್ಯೋಗವಿಲ್ಲದೆ ಬೀದಿಪಾಲಾಗಿದ್ದು, ಯಾವುದೇ ಪ್ರಯೋಜನ ಲಭಿಸಿಲ್ಲ ಎಂದು ಆರೋಪಿಸಿ ಅವರ ಹುಟ್ಟು ಹಬ್ಬವನ್ನು "ರಾಷ್ಟ್ರೀಯ ನಿರುದ್ಯೋಗ ದಿನ"ವನ್ನಾಗಿ ಆಚರಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಮೋದಿ ಜನ್ಮದಿನವಾದ ಸೆಪ್ಟೆಂಬರ್ 17 ರಂದು ದೇಶಾದ್ಯಂತ ವಿವಿಧ ಪ್ರತಿಭಟನೆಗಳನ್ನು ನಡೆಸಲು ನಿರ್ಣಯಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಏಳೂವರೆ ವರ್ಷದ ಆಡಳಿತದಲ್ಲಿ ನಿರುದ್ಯೋಗಿಗಳಿಗೆ ಅನುಕೂಲವಾಗುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಖಾಲಿ ಇರುವ ಉದ್ಯೋಗ ಭರ್ತಿಗೂ ಕ್ರಮ ಕೈಗೊಂಡಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಮೋದಿ ಹೇಳಿದ್ದನ್ನು ಅವರು ನೆನಪಿಸಿದ್ದಾರೆ. ಉದ್ಯೋಗವಿಲ್ಲದೆ ಯುವಕರು ರಸ್ತೆಗಳಲ್ಲಿ ತಿರುಗಾಡುತ್ತಿದ್ದರೆ, ಕೇಂದ್ರ ಸರ್ಕಾರ ಮಾತ್ರ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡು ಪ್ರಚಾರ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಒಂದೇ ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 2.4 ರಿಂದ 10.3 ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ