ಉ.ಪ್ರದೇಶ ಚುನಾವಣೆ ಪ್ರಚಾರ: ಕಾಂಗ್ರೆಸ್‌ನಿಂದ ಮೂರು ದಿನಗಳ ಬಸ್ ಯಾತ್ರೆಗೆ ಸೋನಿಯಾ ಚಾಲನೆ

ಶನಿವಾರ, 23 ಜುಲೈ 2016 (15:42 IST)
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷ 27 ಸಾಲ್ ಯುಪಿ ಬೇಹಾಲ್ ಎನ್ನುವ ಘೋಷಣೆಯೊಂದಿಗೆ ದೆಹಲಿಯಿಂದ ಕಾನ್ಪುರ್‌ವರೆಗಿನ ಮೂರು ದಿನಗಳ ಬಸ್ ಯಾತ್ರೆಗೆ ಇಂದು ಚಾಲನೆ ನೀಡಲಾಯಿತು.
 
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮೂರು ದಿನಗಳ ಬಸ್ ಯಾತ್ರೆಗೆ ಚಾಲನೇ ನೀಡಿದ್ದಾರೆ.
 
ಉತ್ತರಪ್ರದೇಶ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ರಾಜ್ ಬಬ್ಬರ್, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
 
ಉತ್ತರ ಪ್ರದೇಶದ ಜನತೆ ಅಭಿವೃದ್ಧಿ ಬಯಸುತ್ತಿದ್ದಾರೆ. ಬಿಜೆಪಿ, ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ ಅಡಳಿತವನ್ನು ನೋಡಿ ಜನತೆ ಬೇಸತ್ತಿದ್ದಾರೆ. ರಾಜ್ಯದಲ್ಲಿ ಪ್ರಾಮಾಣಿಕ ಸರಕಾರ ಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುವುದೇ ಉತ್ತರಪ್ರದೇಶ ಜನತೆಗೆ ನಮ್ಮ ಸಂದೇಶ ಎಂದು ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದ ಮೂರು ದಿನಗಳ ರೋಡ್‌ಶೋ ಕಾರ್ಯಕ್ರಮದಲ್ಲಿ 27 ವರ್ಷಗಳ ರಾಜಕೀಯ ಪಕ್ಷಗಳ ದುರಾಡಳಿತದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಿದೆ ಎಂದು ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ