ಮೋದಿ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್: ಕಾಂಗ್ರೆಸ್‌ನಿಂದ ವಾಗ್ದಾಳಿ

ಬುಧವಾರ, 25 ಮೇ 2016 (20:26 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ವರ್ಷಗಳ ಅಧಿಕಾರ ಪೂರ್ಣಗೊಳಿಸಿದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಪನಾಮಾ ಪೇಪರ್ಸ್‌ನಲ್ಲಿ ಕಪ್ಪುಹಣ ಹೊಂದಿದವರ ಪಟ್ಟಿಯಲ್ಲಿರುವ ಅಮಿತಾಬ್ ಬಚ್ಚನ್ ಅವರಿಗೆ ಕಾರ್ಯಕ್ರಮವನ್ನು ನಡೆಸಿಕೊಡುವ ಬಗ್ಗೆ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಪ್ರಧಾನಿ ಮೋದಿ ವಿದೇಶಗಳಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಶಿಕ್ಷೆಗೆ ಗುರಿಪಡಿಸುತ್ತೇನೆ ಎಂದು ಹೇಳಿದ್ದರು. ಇದೀಗ ಕಪ್ಪು ಹಣ ಹೊಂದಿದವರ ಪಟ್ಟಿಯಲ್ಲಿ ಬಚ್ಚನ್ ಹೆಸರಿರುವಾಗ  ಮೋದಿ ಕಾರ್ಯಕ್ರಮ ನಡೆಸಿಕೊಡುವುದರಿಂದ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
 
ತನಿಖಾ ಸಂಸ್ಥೆಗಳು ವಿದೇಶಗಳಲ್ಲಿರುವ ಕಪ್ಪು ಹಣ ಹೊಂದಿದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಾಗ, ಪ್ರಧಾನಿ ಮೋದಿ ಕಪ್ಪು ಹಣ ಹೊಂದಿದವರೊಂದಿಗೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಳ್ಳುವುದು ಸೂಕ್ತವೇ ಎಂದು ಕಿಡಿಕಾರಿದ್ದಾರೆ. 
 
ಏತನ್ಮಧ್ಯೆ, ಅಮಿತಾಬ್ ಬಚ್ಚನ್ ಅವರನ್ನು ಕಲಾವಿದರಾಗಿ ಮತ್ತು ಹಿರಿಯ ವ್ಯಕ್ತಿಯಂತೆ ಪ್ರತಿಯೊಬ್ಬ ಭಾರತೀಯ ಪ್ರೀತಿಸಿ ಗೌರವಿಸುತ್ತಾನೆ. ಕಪ್ಪು ಹಣ ಹೊಂದಿದ ಆರೋಪಗಳನ್ನು ಬಚ್ಚನ್ ತಳ್ಳಿಹಾಕಿದ್ದಾರೆ. ಮುಂದೊಂದು ದಿನ ಅವರು ನಿರಪರಾಧಿ ಎನ್ನುವುದು ಸಾಬೀತಾಗಬಹುದು. ಆದರೆ, ಇದೀಗ ಮೋದಿ ಕಾರ್ಯಕ್ರಮವನ್ನು ಅವರು ನಡೆಸಿಕೊಡುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು.
 
ಆದಾಗ್ಯೂ, ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ನಾನು ನಡೆಸಿಕೊಡುತ್ತಿಲ್ಲ. ನಟ ಆರ್ ಮಾಧವನ್ ನಡೆಸಿಕೊಡುತ್ತಿದ್ದಾರೆ ಎಂದು ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನನ್ನ ಹೃದಯಕ್ಕೆ ಹತ್ತಿರವಾದ ಒಂದು ಬೇಟಿ ಬಚಾವೋ ಬೇಟಿ ಪಢಾವೋ ಎನ್ನುವ ಸಣ್ಣ ಭಾಗವನ್ನು ಮಾತ್ರ ನಾನು ನಡೆಸಿಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ