ಕಾಂಗ್ರೆಸ್ ಶಾಸಕಾಂಗ ಸಭೆ: ಇಂದು ಪುದುಚೇರಿ ಮುಖ್ಯಮಂತ್ರಿ ಆಯ್ಕೆ ನಿರ್ಧಾರ

ಶನಿವಾರ, 28 ಮೇ 2016 (10:32 IST)
ವಿಧಾನಸಭೆ ಚುನಾವಣೆ ಫಲಿತಾಂಶದ ವಾರದ ನಂತರ ಕೊನೆಗೂ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. 
 
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಕಾಂಗ್ರೆಸ್ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ.
 
ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಪುದುಚೇರಿಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪುದುಚೇರಿಯ ಕಾಂಗ್ರೆಸ್ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ.
 
ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ವೀಕ್ಷಕರಾಗಿ ಇಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಪುದುಚೇರಿಗೆ ಆಗಮಿಸಲಿದ್ದಾರೆ. 
 
ಏತನ್ಮಧ್ಯೆ, ಪಕ್ಷದ ನಾಯಕರಲ್ಲಿರುವ ಅಂತರಿಕ ಕಚ್ಚಾಟಗಳಿಂದಾಗಿ ಹೈಕಮಾಂಡ್ ಸರಕಾರ ರಚನೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
 
ಮಾಜಿ ಮುಖ್ಯಮಂತ್ರಿ ವಿ.ವೈದ್ಯಲಿಂಗಂ ಮಾತನಾಡಿ, ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಪಕ್ಷದ ನಾಯಕರಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ. 
 
ಸರಕಾರ ರಚನೆಗೆ ವಿಳಂಬವಾಗುತ್ತಿರುವ ಬಗ್ಗೆ ಉತ್ತರಿಸಿದ ಅವರು ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದರಿಂದ, ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಕೇಂದ್ರದ ನಾಯಕರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ