ದೆಹಲಿ ಶಿಕ್ಷಕನ ಹತ್ಯೆ: 1 ಕೋಟಿ ರೂ.ಪರಿಹಾರ ಧನ ಘೋಷಿಸಿದ ಮನೀಷ್ ಸಿಸೋಡಿಯಾ

ಮಂಗಳವಾರ, 27 ಸೆಪ್ಟಂಬರ್ 2016 (18:52 IST)
ಇಬ್ಬರು ವಿದ್ಯಾರ್ಥಿಗಳಿಂದ ಹತ್ಯೆಯಾದ ಶಾಲಾ ಶಿಕ್ಷಕನ ಕುಟುಂಬಕ್ಕೆ ಆಮ್ ಆದ್ಮಿ ಪಾರ್ಟಿ ನೇತೃತ್ವದ ದೆಹಲಿ ಸರಕಾರ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. 
 
ಶಾಲಾ ಶಿಕ್ಷಕನಾದ ಮುಕೇಶ್ ಕುಮಾರ್ ಎನ್ನುವವರನ್ನು ಇಬ್ಬರು ವಿದ್ಯಾರ್ಥಿಗಳು ಚಾಕುವನಿಂದ ಇರಿದು ಗಾಯಗೊಳಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಮುಕೇಶ್ ಮಾರನೇ ದಿನ ಸಾವನ್ನಪ್ಪಿದ್ದರು.
 
ಮುಕೇಶ್ ಕುಮಾರ್ ಕುಟುಂಬಕ್ಕೆ ಯಾರು ಆರ್ಥಿಕ ಸಹಾಯ ಮಾಡಲು ಮುಂದೆ ಬರಲಿಲ್ಲ. ಇದರಿಂದಾಗಿ ದೆಹಲಿ ಸರಕಾರ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
 
ಹಿಂದಿನ ದಿನ ರಾತ್ರಿ ಸಿಸೋಡಿಯಾ ಆಸ್ಪತ್ರೆಗೆ ತೆರಳಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕನ ಯೋಗ ಕ್ಷೇಮ ವಿಚಾರಿಸಿದ್ದರು.
 
ನಮ್ಮ ಸರಕಾರ ಶಿಕ್ಷಕರ ಮಹತ್ವವನ್ನು ಅರಿತಿದೆ. ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕನಿಗೆ ನೀಡುವ ಗೌರವವನ್ನೇ ಶಿಕ್ಷಕರಿಗೆ ಸಹ ನೀಡುತ್ತೇವೆ ಎಂದು ತಿಳಿಸಿದ್ದಾರೆ. 
 
ನಾಂಗ್‌ಲೋಯಿ ಪ್ರದೇಶದಲ್ಲಿರುವ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮುಕೇಶ್ ಕುಮಾರ್, ಕಡಿಮೆ ಹಾಜರಾತಿ ಹಿನ್ನೆಲೆಯಲ್ಲಿ ಸಹಪಾಠಿಗಳ ಮುಂದೆ ತರಾಟೆಗೆ ತೆಗೆದುಕೊಂಡಿದ್ದರಿಂದ ಆಕ್ರೋಶಗೊಂಡ 12 ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಗಂಬೀರವಾಗಿ ಗಾಯಗೊಳಿಸಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ