ಅಡುಗೆ ಅನಿಲದ ಸಿಲಿಂಡರ್ ಸ್ಫೋಟವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇನ್ನೂ 10 ಮಂದಿ ಗಾಯಗೊಂಡ ಘಟನೆ ಸೇಲಂನ ಕಳಿಂಗಪಟ್ಟಿ ಎಂಬಲ್ಲಿ ನಡೆದಿದೆ.
ಪಾಂಡುರಂಗನ್ ರಸ್ತೆಯಲ್ಲಿರುವ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು 80 ವರ್ಷದ ರಾಜಲಕ್ಷ್ಮೀ ಎಂಬುವರು ಮೃತಮಹಿಳೆ. ಇವರು ಚಹಾ ಮಾಡಲೆಂದು ಗ್ಯಾಸ್ ಆನ್ ಮಾಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟವುಂಟಾಗಿದೆ. ಸ್ಥಳಕ್ಕೆ ಶೇವಾಪೇಟ್ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಹಾಗೇ, ಅಗ್ನಿಶಾಮಕದಳದ ಸಿಬ್ಬಂದಿಯೂ ಧಾವಿಸಿದ್ದರು.
ಸಿಲಿಂಡರ್ ಸ್ಫೋಟಗೊಂದ ಮನೆಯಲ್ಲಿದ್ದ ಗೋಪಿ (52) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು ಶೇ.90ರಷ್ಟು ಗಾಯಗೊಂಡಿದ್ದು ಬದುಕುವ ಸಾಧ್ಯತೆ ತುಂಬ ಕಡಿಮೆಯಿದೆ ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಸುತ್ತಲಿದ್ದ ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ವೆಂಕಟರಾಜನ್, ಇಂದಿರಾಣಿ, ಮೋಹನ್ ರಾಜ್, ನಾಗಸುತ, ಗೋಪಾಲ್, ಧನಲಕ್ಷ್ಮೀ, ಸುದರ್ಶನ್, ಗಣೇಶನ್, ಉಷಾರಾಣಿ, ಲೋಕೇಶ್ ಗಾಯಗೊಂಡವರು.
ಘಟನೆ ಬಗ್ಗೆ ಸೇಲಂ ಜಿಲ್ಲಾ ಅಧಿಕಾರಿ ಎಂ.ವೇಲು ಮಾತನಾಡಿ, ಇಂದು ಮುಂಜಾನೆ 6.30ರ ಹೊತ್ತಿಗೆ ನಮಗೆ ಮಾಹಿತಿ ಸಿಕ್ಕಿದೆ. ಇದರಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಸೇಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 10ವರ್ಷದ ಬಾಲಕಿಯೊಬ್ಬಳು ಸ್ಫೋಟದಿಂದ ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದಳು. ಆಕೆಯನ್ನು ರಕ್ಷಿಸಲಾಗಿದೆ ಎಂದಿದ್ದಾರೆ.