ಹಲಸಿನ ಹಣ್ಣು ತಿಂದು ವಾಹನ ಚಲಾಯಿಸುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ರೆ ಕತೆ ಫಿನಿಶ್

Krishnaveni K

ಶನಿವಾರ, 26 ಜುಲೈ 2025 (12:21 IST)
Photo Credit: X
ಪಟ್ಟಣಂತಿಟ್ಟ: ಹಲಸಿನ ಹಣ್ಣು ಸೇವನೆ ಮಾಡಿ ವಾಹನ ಚಲಾಯಿಸುವಾಗ ಟ್ರಾಫಿಕ್ ಪೊಲೀಸರ ಕೈಗೆ ಏನಾದ್ರೂ ಸಿಕ್ಕಿಬಿದ್ದಿರೋ ಹುಷಾರ್. ಯಾಕೆಂದರೆ ಅಂತಹದ್ದೊಂದು ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂದಳಂ ಸರ್ಕಾರೀ ಬಸ್ ಡಿಪೊದಲ್ಲಿ ಪ್ರತೀ ದಿನವೂ ಬಸ್ ಚಾಲಕರು ಬಸ್ ಹೊರ ತೆಗೆಯುವ ಮುನ್ನ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಮಾಡುತ್ತಾರೆ. ಅದೇ ರೀತಿ ಇತ್ತೀಚೆಗೆ ಮೂವರು ಚಾಲಕರನ್ನು ಪರೀಕ್ಷೆ ಮಾಡಿದಾಗ ಆಲ್ಕೋಹಾಲ್ ಪರೀಕ್ಷಿಸುವ ಮೀಟರ್ ನಲ್ಲಿ ಅವರು ಆಲ್ಕೋಹಾಲ್ ಅಂಶ ಸೇವನೆ ಮಾಡಿದ್ದಾರೆ ಎಂದು ಪತ್ತೆಯಾಗಿದೆ.

ಆದರೆ ಅಸಲಿಗೆ ಅವರು ಆಲ್ಕೋಹಾಲ್ ಸೇವನೆಯನ್ನೇ ಮಾಡಿರಲಿಲ್ಲ. ಹಾಗಿದ್ದರೂ ಮೀಟರ್ ನಲ್ಲಿ ತೋರಿಸಿದ್ದು ಹೇಗೆ ಎಂದು ಎಲ್ಲರಿಗೂ ಅಚ್ಚರಿಯಾಗಿತ್ತು. ವಿಚಾರಣೆ ನಡೆಸಿದಾಗ ಮೂವರೂ ಕೆಲವೇ ಕ್ಷಣಗಳ ಮೊದಲು ಹಲಸಿನ ಹಣ್ಣು ಸೇವನೆ ಮಾಡಿದ್ದು ಗೊತ್ತಾಗಿದೆ. ಹೀಗಾಗಿ ಸಂಶಯಗೊಂಡ ಪೊಲೀಸರು ನೆಗೆಟಿವ್ ವರದಿ ಬಂದ ವ್ಯಕ್ತಿಗೆ ಹಲಸಿನ ಹಣ್ಣು ತಿನ್ನಿಸಿ ಪರೀಕ್ಷಿಸಿದ್ದಾರೆ. ಆಗ ಆತನಲ್ಲೂ ವರದಿ ಪಾಸಿಟಿವ್ ಬಂದಿದೆ.

ಈಗ ಹಲಸಿನ ಹಣ್ಣಿನ ಸೇವನೆಯಿಂದಾಗಿಯೇ ಈ ಚಾಲಕರಲ್ಲಿ ಆಲ್ಕೋಹಾಲ್ ಅಂಶವಿರುವುದಾಗಿ ಮೀಟರ್ ತೋರಿಸಿದೆ ಎನ್ನುವುದು ಸ್ಪಷ್ಟವಾಗಿದೆ.  ಹಲಸಿನ ಹಣ್ಣಿನಲ್ಲಿ ಎಥೆನಾಲ್ ಎನ್ನುವ ಆಲ್ಕೋಹಾಲ್ ಅಂಶವಿರುತ್ತದೆ. ಹೀಗಾಗಿ ಮೀಟರ್ ನಲ್ಲಿ ಆಲ್ಕೋಹಾಲ್ ಸೇವಿಸಿರುವುದಾಗಿ ತೋರಿಸಿತ್ತು. ಹೀಗಾಗಿ ಮುಂದಿನ ಸಲ ಡ್ರೈವಿಂಗ್ ಮಾಡುವ ಮೊದಲು ಹಲಸಿನ ಹಣ್ಣು ಸೇವನೆ ಮಾಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ