ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಖರ್ಚಾದ ಹಣವೆಷ್ಟು ಗೊತ್ತೇ?
ಶನಿವಾರ, 29 ಡಿಸೆಂಬರ್ 2018 (12:23 IST)
ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ವರ್ಷಗಳಲ್ಲಿ ವಿದೇಶಿ ಪ್ರವಾಸಕ್ಕೆ ಸುಮಾರು 2,021 ಕೋಟಿ ರು ಖರ್ಚಾಗಿದೆಯಂತೆ. ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಕ್ಕೆ ಆಗಿರುವ ಖರ್ಚು ವೆಚ್ಚದ ವಿವರಗಳು ಇಂತಿವೆ.
ಮೋದಿ ವಿದೇಶ ಪ್ರವಾಸಕ್ಕೆ ಚಾರ್ಟರ್ಡ್ ವಿಮಾನ, ಅದರ ನಿರ್ವಹಣೆ ಮತ್ತು ಹಾಟ್‌ಲೈನ್ ಸೌಲಭ್ಯಕ್ಕಾಗಿ 2021 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
‘2014ರ ಜೂನ್‌ನಿಂದ 2018ರವರೆಗೆ ಮೋದಿಯವರು ಭೇಟಿ ನೀಡಿದ ದೇಶಗಳು, ದೇಶಕ್ಕೆ ಗರಿಷ್ಠ ನೇರ ವಿದೇಶಿ ಬಂಡವಾಳ ಹರಿದು ಬಂದ ಅಗ್ರ ಹತ್ತು ದೇಶಗಳಾಗಿ ರೂಪುಗೊಂಡಿವೆ. ವಿದೇಶಿ ನೇರ ಬಂಡವಾಳ 2014ರಿಂದ ಜೂನ್ 2018ರ ವೇಳೆಗೆ 136,077.75 ಮಿಲಿಯನ್ ಯುಎಸ್ ಡಿ ಇತ್ತು. 2011 ರಿಂದ 2014ರ ವೇಳೆಗೆ 81,843.71 ಮಿಲಿಯನ್ ಯುಎಸ್ ಡಾಲರ್ ಮಾತ್ರ ಆಗಿತ್ತು ಎಂದಿದ್ದಾರೆ.
ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿ(ಯುಪಿಎ 2)ಯಲ್ಲಿ ಐದು ವರ್ಷ ಬಾಡಿಗೆ ವಿಮಾನ, ವಿಮಾನ ನಿರ್ವಹಣೆ ಹಾಗೂ ಹಾಟ್‌ಲೈನ್ ಸೌಲಭ್ಯಕ್ಕಾಗಿ 1346 ಕೋಟಿ ರೂಪಾಯಿ ಖರ್ಚಾಗಿತ್ತು.
ಪ್ರಧಾನಿ ವಿಮಾನ ನಿರ್ವಹಣೆಗೆ 1583.18 ಕೋಟಿ ರೂಪಾಯಿ, ವಿಮಾನ ಬಾಡಿಗೆಯಾಗಿ 429.25 ಕೋಟಿ ವೆಚ್ಚವಾಗಿತ್ತು. ಹಾಟ್‌ಲೈನ್‌ಗೆ ಮಾಡಿದ ವೆಚ್ಚ 9.11 ಕೋಟಿ ರೂಪಾಯಿ. 48 ವಿದೇಶ ಪ್ರವಾಸಗಳಲ್ಲಿ ಮೋದಿ 55 ದೇಶಗಳಿಗೆ ಭೇಟಿ ನೀಡಿದ್ದಾರೆ.