ಸಂಕ್ರಾಂತಿ ಹಬ್ಬಕ್ಕೆ ಹಣ ಕೊಡಲಿಲ್ಲವೆಂದು ಪತಿ ಪತ್ನಿಗೆ ಮಾಡಿದ್ದೇನು ಗೊತ್ತಾ?
ಮಂಗಳವಾರ, 15 ಜನವರಿ 2019 (09:50 IST)
ಚೆನ್ನೈ : ಸಂಕ್ರಾಂತಿ ಹಬ್ಬಕ್ಕೆ ಪತ್ನಿ ಹಣ ಕೊಡಲಿಲ್ಲ ಎಂದು ಕೋಪಗೊಂಡ ಪತಿ ಆಕೆ ಮಲಗಿದ್ದ ವೇಳೆ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ತಮಿಳುನಾಡಿನ ಒಸಿಲಿಂಪಟ್ಟಿ ಗ್ರಾಮದ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ರಸಾತಿ(65) ಕೊಲೆಯಾದ ದುರ್ದೈವಿ. ರಾಮರ್(70) ಪತ್ನಿಯನ್ನೇ ಕೊಂದ ಪಾಪಿ ಪತಿ. ರಸಾತಿ ಕೇರಳದಲ್ಲಿ ದಿನಕೂಲಿ ಕೆಲಸ ಮಾಡಿಕೊಂಡು ತಿಂಗಳಿಗೆ ಒಮ್ಮೆ ಮನೆಗೆ ಬರುತ್ತಿದ್ದಳು. ಅಲ್ಲದೆ ತನ್ನ ದುಡಿಮೆಯಲ್ಲಿಯೇ ಕುಟುಂಬವನ್ನು ಸಾಕುತ್ತಿದ್ದಳು. ಆದರೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳುನಾಡು ಸರ್ಕಾರ ದಿನಕೂಲಿ ಕಾರ್ಮಿಕರಿಗೆ ನೀಡಿದ 1 ಸಾವಿರ ರೂ. ಹಣದಲ್ಲಿ ಅರ್ಧ ಅಂದ್ರೆ 500 ರೂ. ತನಗೆ ಕೊಡು ಎಂದು ರಾಮರ್ ಪತ್ನಿಯನ್ನು ಕೇಳಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಕೋಪಗೊಂಡ ಆತ ರಾತ್ರಿ ಪತ್ನಿ ನಿದ್ರೆ ಮಾಡುತ್ತಿದ್ದ ವೇಳೆ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ.
ಈ ಘಟನೆಯ ಬಳಿಕ ಆರೋಪಿ ರಾಮರ್ ತಾನೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ವಿಷಯ ತಿಳಿಸಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮಹಿಳೆಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.