ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಜಯಲಲಿತಾ ನಕಲಿ ಪೋಟೋ

ಭಾನುವಾರ, 2 ಅಕ್ಟೋಬರ್ 2016 (15:38 IST)
ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿಸಿ ಸಿಗುತ್ತಿಲ್ಲ. ಹೀಗಾಗಿ ಅನೇಕ ವದಂತಿಗಳು ಹರಿದಾಡುತ್ತಿವೆ. ಕಳೆದ ಎರಡು ಮೂರು ದಿನಗಳಿಂದ ಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ವ್ಯಾಪಕ ಚರ್ಚೆಯನ್ನು ಹುಟ್ಟಿ ಹಾಕಿತ್ತು. ಮತ್ತೀಗ ಎಲ್ಲ ವದಂತಿಗಳಿಗೆ ತೆರೆ ಬಿದ್ದಿದ್ದು ಆ ಫೋಟೋ ನಕಲಿ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಜೀವರಕ್ಷಕವನ್ನು ಧರಿಸಿ ಮಲಗಿರುವ ಮಹಿಳೆಯ ಫೋಟೋವೊಂದು ಜಯಾ ಅವರನ್ನೇ ಹೋಲುತ್ತಿದ್ದು ಮೊದಲು ಈ ಫೋಟೋ ನೈಜ ಎಂದು ಬಗೆಯಲಾಗಿತ್ತು. ಆದರೆ ಮತ್ತೀಗ ಇದು ಪೆರುವಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಬೇರೆ ರೋಗಿಯದ್ದು ಮತ್ತು 7 ವರ್ಷ ಹಳೆಯದು ಎಂದು ತಿಳಿದು ಬಂದಿದೆ.
 
ಈ ಫೋಟೋ, ವದಂತಿಯ ಹಿಂದೆ ಡಿಎಂಕೆ ಕೈವಾಡವಿದೆ ಎಂದು ಜಯಾ ಪ್ರತಿನಿಧಿಸುವ ಎಐಡಿಎಂಕೆ ಆರೋಪಿಸಿದೆ. ಆದರೆ ಕರುಣಾ ಪಕ್ಷ ಈ ಆರೋಪವನ್ನು ತಳ್ಳಿ ಹಾಕಿದೆ. 
 
ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.
 
ಲಂಡನ್ ಬ್ರಿಡ್ಜ್ ಆಸ್ಪತ್ರೆಯ ರಿಚರ್ಡ್ ಜಾನ್ ಸೇರಿದಂತೆ ಇಂಗ್ಲೆಂಡ್ ಮತ್ತು ಅಮೇರಿಕದಿಂದ ಆಗಮಿಸಿರುವ ತಜ್ಞ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುತ್ತಿದೆ.
 
ಜಯಲಲಿತಾ ಕಳೆದ ಸೆಪ್ಟೆಂಬರ್ 22 ರಂದು ನಿರ್ಜಲೀಕರಣ ಮತ್ತು ಜ್ವರದ ಬಾಧೆಗೊಳಗಾಗಿ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಕೆಲವು ದಿನಗಳ ಮಟ್ಟಿಗೆ ಅವರನ್ನು ನಿಗಾವಣೆಯಲ್ಲಿ ಇಡಲಾಗುವುದು ಎಂದು ಆಸ್ಪತ್ರೆ ಸೆಪ್ಟೆಂಬರ್ 23 ರಂದು ಪತ್ರಿಕಾ ಹೇಳಿಕೆಯನ್ನು ನೀಡಿತ್ತು. ಆದರೆ ಅವರ ಆರೋಗ್ಯದ ಕುರಿತಾದ ಯಾವುದೇ ನಂಬಲರ್ಹ ವರದಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.
 
ಆಸ್ಪತ್ರೆ ಅವರ ಆರೋಗ್ಯದ ಕುರಿತಾಗಿ ನಿಯತಕಾಲಿಕವಾಗಿ ಯಾವುದೇ ಸ್ಪಷ್ಟತೆ ಇಲ್ಲದ ಸಾಮಾನ್ಯ ಹೇಳಿಕೆಗಳನ್ನು ನೀಡುತ್ತ ಬಂದಿದೆ. ಅದು ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ.
 
ಅವರು ಅತಿಯಾದ ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೊದಲು ವದಂತಿ ಹರಡಿತ್ತು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹಬ್ಬಿತು. ಬಳಿಕ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂಬ ವದಂತಿ ಹಬ್ಬಿತು.
 
ಆದರೆ ಈ ವದಂತಿಗಳನ್ನು ತಳ್ಳಿ ಹಾಕುತ್ತಲೇ ಬಂದಿರುವ ಆಸ್ಪತ್ರೆ ಮೂಲಗಳು ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುತ್ತ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ