ಕೋಲ್ಕತ್ತಾ : ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ರಾತ್ರಿ ಭೋಜನ ಸವಿದು ಮಾತುಕತೆ ನಡೆಸಿದ್ದಾರೆ.
ಈ ಮೂಲಕ ದಾದಾ ಬಿಜೆಪಿ ಪಕ್ಷ ಸೇರುತ್ತಾರೆಂಬ ಗುಸುಗುಸು ಮತ್ತೆ ಕೇಳಿಬಂದಿದೆ. 2 ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ನಿನ್ನೆ ರಾತ್ರಿ ಗಂಗೂಲಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿ ಕೆಲ ಕಾಲ ಮಾತುಕತೆ ನಡೆಸಿದರು.
ಆ ಬಳಿಕ ಇದೀಗ ಗಂಗೂಲಿ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಚರ್ಚೆ ಜೋರಾಗಿದೆ. ಇತ್ತ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿರುವುದರಿಂದ ಕೋಲ್ಕತ್ತಾ ಭೇಟಿ ವೇಳೆ ಗಂಗೂಲಿ ಮನೆಗೆ ಸಹಜವಾಗಿಯೇ ಭೇಟಿ ಕೊಟ್ಟಿದ್ದಾರೆ ಎಂಬ ಮಾತು ಒಂದೆಡೆ ಹರಿದಾಡುತ್ತಿದೆ.
ಈ ಬಗ್ಗೆ ಭೋಜನ ಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ನಮ್ಮ ಭೇಟಿಯಲ್ಲಿ ರಾಜಕೀಯವಾಗಿ ಏನೂ ನಡೆದಿಲ್ಲ. ಹಲವು ವರ್ಷಗಳಿಂದ ನಾನು ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಈ ಹಿಂದೆ ಹಲವು ಬಾರಿ ಭೇಟಿಯಾಗಿದ್ದೇನೆ.
ಕೋಲ್ಕತ್ತಾಗೆ ಭೇಟಿ ನೀಡಿದ ಕಾರಣ ಅಮಿತ್ ಶಾರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದೆ ಹಾಗಾಗಿ ಬಂದಿದ್ದಾರೆ ಎಂದರು.