ಗೌರಿ ಲಂಕೇಶ್ ಹತ್ಯೆ ಹಿನ್ನೆಲೆ: ಅ.5ರಂದು ನವದೆಹಲಿಯಲ್ಲಿ ಪ್ರತಿಭಟನೆ

ಮಂಗಳವಾರ, 26 ಸೆಪ್ಟಂಬರ್ 2017 (00:13 IST)
ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಅಕ್ಟೋಬರ್ 5ಕ್ಕೆ ಒಂದು ತಿಂಗಲೂ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅ.5ಕ್ಕೆ ಗೌರಿ ಹತ್ಯೆಯಾಗಿ ಒಂದು ತಿಂಗಳು ಪೂರ್ಣವಾಗಲಿದೆ. ಆದರೆ ಘಟನೆ ನಡೆದು ತಿಂಗಳಾದರೂ ಸಹ ಆರೋಪಿಗಳ ಬಂಧನವಾಗಿಲ್ಲ. ಪನ್ಸಾರೆ, ಕಲ್ಬುರ್ಗಿ ಕೊಂದ ಹಂತಕರನ್ನು ಬಂಧಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಪ್ರಗತಿಪರರು ದೆಹಲಿಯ ಮಂಡಿಹೌಸ್ ನಿಂದ ಜಂತರ್ ಮಂತರ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ.

ಹತ್ಯೆಯನ್ನು ಸಂಭ್ರಮಿಸುವರನ್ನ ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ. ಗೌರಿ ಹತ್ಯೆಯ ಬಗ್ಗೆ ಪ್ರಧಾನಿ ಒಂದು ಪದವನ್ನೂ ಮಾತನಾಡಿಲ್ಲ. ಈ ಮೌನ ಹತ್ಯೆಯನ್ನು ಸಮರ್ಥಿಸುವಂತಿದೆ ಎಂದು ಪ್ರಧಾನಿ ವಿರುದ್ಧ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್, ಡಾ.ವಾಸು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ