ಬೆಂಗಳೂರು: ಸರಕಾರವನ್ನು ರಚಿಸುವುದು ಹಣದ ಆಧಾರದಲ್ಲಿ ಎಂಬ ನಂಬಿಕೆ ನಮ್ಮದಲ್ಲ. ಇಲ್ಲಿನ ತನಕ ನಾವು ಸರಕಾರ ರಚಿಸಿದ್ದು ಶಾಸಕರ ಬೆಂಬಲದಿಂದಲೇ ವಿನಾ ಯಾವುದೇ ಹಣಕಾಸಿನ ಬೆಂಬಲದೊಂದಿಗೆ ಸರಕಾರ ರಚಿಸಿಲ್ಲ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 'ಸಿಎಂ ಆಗಲು 1,200 ಕೋಟಿ ಇಟ್ಟುಕೊಂಡಿದ್ದಾರೆ. ಸರಕಾರ ಉರುಳಿಸಲು ಪ್ರಯತ್ನ ನಡೆದಿದೆ ಎಂಬ ಬಿಜೆಪಿ ಪ್ರಮುಖ ನಾಯಕರು ಆರೋಪಿಸಿದ್ದಾರೆ' ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರ ನೀಡಿದರು. ಇದನ್ನು ಯಾವುದೇ ಕಾರಣಕ್ಕೂ ಪಕ್ಷ ಒಪ್ಪಲು ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು. ಆ ರೀತಿಯ ಹೇಳಿಕೆಯು ಅವರ ವೈಯಕ್ತಿಕವಾದುದು. ಇದನ್ನು ಬಿಜೆಪಿ ಒಪ್ಪಲಸಾಧ್ಯ ಎಂದು ತಿಳಿಸಿದರು.
ಇದನ್ನು ಪಕ್ಷದ ವರಿಷ್ಠರು ಖಂಡಿತವಾಗಿ ಗಮನಿಸುತ್ತಾರೆ ಎಂದರಲ್ಲದೆ, ಯಾವ ಹಿನ್ನೆಲೆಯಲ್ಲಿ ಇದನ್ನು ಹೇಳಿದ್ದಾರೆ ಎಂಬ ವರದಿ ತರಿಸಿಕೊಂಡು ಮುಂದಿನ ದಿನಗಳಲ್ಲಿ ನಾವು ಅದಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಪದೇಪದೇ ಇಂಥ ಹೇಳಿಕೆ ಕೊಡುವ ಅದೇ ನಾಯಕÀರ ವಿರುದ್ಧ ಕ್ರಮ ಯಾವಾಗ ಎಂದು ಕೇಳಿದಾಗ, ಪದೇಪದೇ ಈ ರೀತಿ ಮಾಡುವುದು ಸರಿಯಲ್ಲ ಎಂಬ ಚಿಂತನೆ ಕಾರ್ಯಕರ್ತರು ಮತ್ತು ಪಕ್ಷದ ವಲಯದಲ್ಲಿದೆ. ಇವತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಉಳಿದ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ಚಟುವಟಿಕೆಗಳು ಪಕ್ಷಕ್ಕೆ ಮುಜುಗರ ತರುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ನಮ್ಮದು ಎಂದು ತಿಳಿಸಿದರು.
ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ನಾಯಕತ್ವ: ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುತ್ತಿರಬೇಕಾದರೆ, ಎಲ್ಲ ಪಕ್ಷನಿಷ್ಠರೂ ಈ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಕ್ಟೋಬರ್ 15ರವರೆಗೆ ಇದೇ ಕಾರ್ಯಕ್ರಮ. ಬೇರೆ ಯಾವುದೇ ಕಾರ್ಯಕ್ರಮವನ್ನು ಯಾರಿಗೂ ಕೊಟ್ಟಿಲ್ಲ. ಇನ್ಯಾವುದೋ ಸಭೆಗಳನ್ನು ಮಾಡಬಾರದೆಂದು ಕೂಡ ನಾವು ಸ್ಪಷ್ಟ ಮಾಡಿದ್ದೇವೆ. ಎಲ್ಲ ಸಭೆಗಳೂ ಪಕ್ಷದ ಸದಸ್ಯತ್ವ ಹಿನ್ನೆಲೆಯಲ್ಲಿ ನಡೆಯಬೇಕೇ ವಿನಾ ಬೇರೆ ಯಾವ ಹಿನ್ನೆಲೆಯಲ್ಲೂ ನಡೆಯಬಾರದು ಎಂದು ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಅದು ವೈಯಕ್ತಿಕವೇ ವಿನಾ ಪಕ್ಷಕ್ಕೆ ಒಳಿತಾಗುವಂಥದ್ದು ಖಂಡಿತ ಅಲ್ಲ. ಇದರ ವಿರುದ್ಧ ಯಾರೋ ಚಟುವಟಿಕೆ ಮಾಡಿದರೆ, ಪಕ್ಷದ ಹೈಕಮಾಂಡ್ ಅದನ್ನು ಖಂಡಿತ ಗಮನಿಸಲಿದೆ. ಕಳೆದ 2-3 ದಿನಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕೇಂದ್ರ ನಾಯಕತ್ವ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದರು.
ಈ ಸಂಬಂಧ ಕೇಂದ್ರದ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಇದೆಲ್ಲವನ್ನೂ ತಿಳಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಪಕ್ಷ ನಿಷ್ಠರು, ಪಕ್ಷ ವಿರೋಧಿಗಳು ಎಂದೇನಿಲ್ಲ. ಎಲ್ಲರೂ ಪಕ್ಷ ನಿಷ್ಠರೇ; ಪಕ್ಷಕ್ಕೆ ಮುಜುಗರ ಆಗುವಂಥ ಕ್ರಮವನ್ನು ಯಾರೂ ಮಾಡಬಾರದು. ಪಕ್ಷ ನಿಷ್ಠರು ಎಂದು ಮುಜುಗರ ಮಾಡುವುದನ್ನು, ಪ್ರತ್ಯೇಕ ಸಭೆ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ನಾವು ತಯಾರಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
40 ಲಕ್ಷ ಸದಸ್ಯತ್ವ ನೋಂದಣಿ ಗುರಿ ಮುಟ್ಟಿದ್ದೇವೆ: ಕರ್ನಾಟಕದಲ್ಲಿ ಮೊದಲ ಹಂತದ ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷೆಗೆ ತಕ್ಕಂತೆ ವೇಗ ತೆಗೆದುಕೊಂಡಿದ್ದೇವೆ. ಇವತ್ತಿಗೆ ಕರ್ನಾಟಕದಲ್ಲಿ 40 ಲಕ್ಷ ಸದಸ್ಯತ್ವದ ಗುರಿ ಮುಟ್ಟಿದ್ದೇವೆ ಎಂದು ವಿವರ ನೀಡಿದರು. ನಾಳೆಯಿಂದ ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ಲಭಿಸಲಿದ್ದು, ಮುಂದಿನ 15 ದಿನಗಳಲ್ಲಿ ಸಾರ್ವಜನಿಕವಾಗಿ ದೊಡ್ಡ ಪ್ರಮಾಣದಲ್ಲಿ ಅಭಿಯಾನ ಮಾಡಬೇಕೆಂದು ಯೋಚನೆ ಮಾಡಿದ್ದೇವೆ. 3ರಂದು ಕರ್ನಾಟಕದಲ್ಲಿ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕರ ನೇತೃತ್ವದಲ್ಲಿ ನಮ್ಮ 9 ವಿಭಾಗಗಳಲ್ಲಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಅಕ್ಟೋಬರ್ 5, 6ರಂದು ಕರ್ನಾಟಕದ ಎಲ್ಲ ಬೂತ್‍ಗಳಲ್ಲಿ ಏಕಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಎರಡನೇ ಹಂತದ ಸದಸ್ಯತ್ವ ಅಭಿಯಾನಕ್ಕೆ ವೇಗ ಕೊಡಬೇಕು; ಕರ್ನಾಟಕದಲ್ಲಿ ಆ 2 ದಿನಗಳ ಅವಧಿಯಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಕರ್ನಾಟಕದ 1.5 ಕೋಟಿ ಸದಸ್ಯತ್ವ ನೋಂದಣಿ ಗುರಿಯನ್ನು ಹಂತ ಹಂತವಾಗಿ ತಲುಪಲು ಯೋಜಿಸಿದ್ದು, ಅದಕ್ಕೆ ತಕ್ಕಂತೆ ಅಭಿಯಾನ ಮುನ್ನಡೆಸುವ ಪ್ರಯತ್ನ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳ ನೇತೃತ್ವದಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ನಂದೀಶ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಇದ್ದರು.