ನವದೆಹಲಿ(ಆ.13): ಪ್ರಧಾನಿ ನರೇಂದ್ರ ಮೋದಿ ಅವರ ಪುನಾರಚಿತ ಸಚಿವ ಸಂಪುಟದ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಒಂದು ವಿಚಾರಕ್ಕೆ ಮೆಚ್ಚಲೇಬೇಕು, ಅವರು ತಮ್ಮ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಕಾಯ್ದುಕೊಂಡಿದ್ದಾರೆ. ಇದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.
ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ 12 ಮಹಿಳೆಯರು, ಎಂಟು ಮಂದಿ ಎಸ್ಸಿ ಮತ್ತು 12 ಮಂದಿ ಎಸ್ಟಿಸಮುದಾಯದವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. ನಿಜವಾಗಿಯೂ ಸಾಮಾಜಿಕ ನ್ಯಾಯ ಕಲ್ಪಿಸಲು ಈ ರೀತಿ ಮಾಡಿದ್ದಾರೆಯೇ ಅಥವಾ ಇದೊಂದು ಚುನಾವಣಾ ತಂತ್ರಗಾರಿಕೆಯೇ ಗೊತ್ತಿಲ್ಲ. ಅದೇನೇ ಇದ್ದರೂ ಮೋದಿ ಅವರ ಈ ಪ್ರಯತ್ನವನ್ನು ಸ್ವಾಗತಿಸಲೇಬೇಕು ಎಂದರು. ಈ ರೀತಿ ಸದನ ನೋಡಿಲ್ಲ:
ಇದೇ ವೇಳೆ ಸಂಸತ್ ಕಲಾಪ ಗದ್ದಲದಿಂದಾಗಿ ವ್ಯರ್ಥವಾಗುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ನಾನು ಮೊದಲ ಬಾರಿಗೆ ಇಡೀ ಅಧಿವೇಶನದಲ್ಲಿ ಕೂತಿದ್ದೆ. ಒಂದೇ ಒಂದು ದಿನವೂ ತಪ್ಪಿಸಿಲ್ಲ. ಆಡಳಿತ, ವಿಪಕ್ಷಗಳು ಒಂದು ನಿಲುವಿಗೆ ಬಂದು ಸದನ ನಡೆಯುವಂತೆ ನೋಡಿಕೊಳ್ಳಬೇಕು. ನಾನು ಯಾರ ಮೇಲೂ ತಪ್ಪು ಹೊರಿಸಲು ಹೋಗಲ್ಲ. ಕಳೆದ 60-65 ವರ್ಷಗಳ ಅವಧಿಯಲ್ಲಿ ಈ ರೀತಿ ಸಂಸತ್ ಸದನ ನಡೆದದ್ದು ನೋಡಿಲ್ಲ. ನವೆಂಬರ್ನಲ್ಲಿ ನಡೆಯುವ ಅಧಿವೇಶನವಾದರೂ ಸುಗಮವಾಗಿ ನಡೆಯುವಂತೆ ಆಡಳಿತ ಮತ್ತು ಪ್ರತಿಪಕ್ಷಗಳು ಮಾರ್ಗವೊಂದನ್ನು ಹುಡುಕಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೊಮ್ಮಾಯಿ ಭೇಟಿ:
ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮನ್ನು ಭೇಟಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡ, ಬೊಮ್ಮಾಯಿ ಅವರು ನನ್ನ ಆಶೀರ್ವಾದ ಪಡೆದರು. ಯಡಿಯೂರಪ್ಪನವರನ್ನು ಜೊತೆಯಲ್ಲಿಟ್ಟುಕೊಂಡು ಹೋಗಿ ಎಂದು ಸಲಹೆ ನೀಡಿದ್ದೇನೆ ಎಂದಷ್ಟೇ ಪ್ರತಿಕ್ರಿಯಿಸಿದರು.
ಇದೇ ವೇಳೆ, ಬೊಮ್ಮಾಯಿ ಸರ್ಕಾರಕ್ಕೆ ತೊಂದರೆ ಕೊಡುವ ಉದ್ದೇಶ ಜೆಡಿಎಸ್ಗೆ ಇಲ್ಲ. ಅಭಿವೃದ್ಧಿಯ ಜತೆಗೆ ನೆಲ, ಜಲ, ಸಂಸ್ಕೃತಿಯ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಪಕ್ಷವು ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.