3 ಕೋಟಿ ಮನೆ ಒಡತಿಯಾದರೂ ಬೀದಿಬದಿಯಲ್ಲಿ ಫಾಸ್ಟ್ ಫುಡ್ ಮಾರಾಟ

ಶುಕ್ರವಾರ, 5 ಆಗಸ್ಟ್ 2016 (17:33 IST)
ಇದು ಸ್ವಾವಲಂಬನೆಯಿಂದ ಬದುಕುವ ಹೆಣ್ಣಿನ ಕಥೆ. ಕೋಟ್ಯಾಧೀಶ ಕುಟುಂಬದ ಹಿನ್ನೆಲೆ ಇದ್ದರೂ ಫಾಸ್ಟ್ ಫುಡ್ ಮಾರುತ್ತ ಸರಳ ಜೀವನವನ್ನು ನಡೆಸುವ 34 ವರ್ಷದ ಮಹಿಳೆಯ ಪ್ರೇರಣಾದಾಯಕ ಕಥೆ.
ಗುರ್ಗಾಂವ್ ನಿವಾಸಿಯಾಗಿರುವ ಊರ್ವಶಿ ಯಾದವ್ (34) ಈ ಹಿಂದೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 3 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುವ ಅವರ ಬಳಿ ದುಬಾರಿ ಬೆಲೆಯ ಎಸ್.ಯು.ವಿ. ಕಾರು ಕೂಡ ಇದೆ.ಆದರೆ ಆಕೆ ಬೀದಿ ಬದಿಯಲ್ಲಿ ಚೋಲೆ ಕುಲ್ಚೆ ಮಾರುತ್ತಾಳೆ. ತನ್ನ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಇದು ಅಗತ್ಯ ಎನ್ನುತ್ತಾಳೆ ಆಕೆ.

ಊರ್ವಶಿ ಯಾದವ್ 45 ದಿನಗಳಿಂದ ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಮಾರಾಟ ಮಾಡಲು ಪ್ರಾರಂಭಿಸಿದ್ದಾಳೆ. ಕಳೆದ 6 ವರ್ಷಗಳಲ್ಲಿ ಎರಡನೆಯ ಬಾರಿಗೆ ಆಕೆಯ ಪತಿ ಅಪಘಾತಕ್ಕೀಡಾಗಿದ್ದು ಹಾಸಿಗೆ ಹಿಡಿದಿದ್ದಾರೆ. ಕನ್ ಸ್ಟ್ರಕ್ಷನ್ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪತಿ ಅಮಿತ್(37) ಯಾದವ್ ಕೆಲಸ ಮಾಡಲಾಗದಿರುವುದರಿಂದ ಊರ್ವಶಿ ತಾವೇ ಕುಟುಂಬವನ್ನು ನಿರ್ವಹಿಸಲು ನಿಂತಿದ್ದಾರೆ .ಊರ್ವಶಿ ಮಾವ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಆಗಿದ್ದಾರೆ.

12 ವರ್ಷದ ಮಗಳು ಹಾಗೂ 7 ವರ್ಷದ ಮಗನ ಭವಿಷ್ಯಕ್ಕಾಗಿ ಇದು ಅನಿವಾರ್ಯ ಎನ್ನುತ್ತಾಳೆ ಊರ್ವಶಿ.  ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಊರ್ವಶಿ ದಿನಕ್ಕೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ದುಡಿಯುತ್ತಿದ್ದಾರೆ.

ನಾವೀಗ ಆರ್ಥಿಕವಾಗಿ ದುಃಸ್ಥಿತಿಯಲ್ಲಿ ಇಲ್ಲ, ನಿಜ. ಆದರೆ ಭವಿಷ್ಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ಕಾಲ ಕೆಡುವುದಕ್ಕಿಂತ ಮೊದಲು ನಾನು ಭವಿಷ್ಯದ ಹಿತ ದೃಷ್ಟಿಗೆ ನಾನು ಚಿಂತಿಸಲೇ ಬೇಕಿದೆ.ಶಿಕ್ಷಕಿಯಾಗಿ ಕೆಲಸ ಮಾಡಿ ಸಾಕಷ್ಟು ಹಣವನ್ನು ಉಳಿತಾಯ ಮಾಡಲಾಗದು ಎಂದು ಅರಿವಾಗಿ  ನಾನು ಈ ಅಂಗಡಿಯನ್ನಿಟ್ಟುಕೊಂಡಿದ್ದೇನೆ. ಅಡುಗೆ ಮಾಡುವುದು ನನಗೆ ತುಂಬಾ ಇಷ್ಟ. ಹೀಗಾಗಿ ಇದರಲ್ಲಿ ಹಣ ಹೂಡಿದ್ದೇನೆ ಎಂದಾಕೆ ಹೇಳುತ್ತಾಳೆ.

ವೆಬ್ದುನಿಯಾವನ್ನು ಓದಿ