ಮುಂಬೈ ದಾಳಿ ರೂವಾರಿ, ಜಮಾತ್ ಉಲ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್, ಭಾರತಕ್ಕೆ ಬುದ್ಧಿ ಕಲಿಸಲು ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಎಂದು ಪಾಕ್ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಬಳಿ ಕೇಳಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
'ಡಿಫೆನ್ಸ್ ಕೌನ್ಸಿಲ್ ಆಫ್ ಪಾಕಿಸ್ತಾನ' ಬ್ಯಾನರ್ ಅಡಿಯಲ್ಲಿ ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಆತ, ನಾವು ಪಾಕಿಸ್ತಾನದಲ್ಲಿಯೇ ಇರಲು ಬಯಸುತ್ತೇವೆ ಎಂದು ಪ್ರತ್ಯೇಕವಾಗುವುದಕ್ಕೆ ಮೊದಲೇ ಕಾಶ್ಮೀರಿಗಳು ಘೋಷಿಸಿದ್ದರು. ಆದರೆ ಇಬ್ಭಾಗವಾದ ನಂತರ ಭಾರತ ಒತ್ತಾಯ ಪೂರ್ವಕವಾಗಿ ಸೈನ್ಯವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿತು. ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಮೊದಮ್ಮದ್ ಅಲಿ ಜಿನ್ನಾ ಅವರು ಆಗಿನ ಕಮಾಂಡರ್- ಇನ್-ಚೀಪ್‌ಗೆ ಆದೇಶಿಸಿದ್ದರು. ಆದರೆ ಅವರ ಆದೇಶವನ್ನು ಪಾಲಿಸಲಾಗಲಿಲ್ಲ. ಈಗ ನಾನು ಜನರಲ್ ರಾಹೀಲ್ ಷರೀಫ್ ಅವರ ಬಳಿ ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾನೆ.