ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಸಾವಿರಾರು ಜನರು ಆಗಮಿಸಿದ್ದರು. ಸಂಪೂರ್ಣ ಕುರುಕ್ಷೇತ್ರವೇ ಸ್ಮಶಾನ ಮೌನಕ್ಕೆ ಶರಣಾಗಿತ್ತು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ಕಣ್ಣಾಲಿಗಳು ತೇವಗೊಂಡಿದ್ದವು. ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವಾಗ ಸಿಎಂ ಮನೋಹರ್ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಮಗನ ಕಳೆದುಕೊಂಡ ನೋವು ಯಾರೊಬ್ಬರಿಗೂ ಬರದಿರಲಿ. ಆ ನೋವು ಸಹಿಸಲಸಾಧ್ಯವಾದದ್ದು. ಭಗವಂತ ಆ ನೋವನ್ನು ಭರಿಸುವ ಶಕ್ತಿ ನೀಡಲೆಂದಷ್ಟೇ ಪ್ರಾರ್ಥಿಸಬಹುದು ಎಂದರು. ಅಲ್ಲದೆ, ಹುತಾತ್ಮ ಯೋಧನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದರು.
ದೀಪಾವಳಿ ಸಂದರ್ಭದಲ್ಲಿ ಯೋಧ ಹುತಾತ್ಮನಾಗಿದ್ದು, ಸಂಪೂರ್ಣ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ದುಃಖದಲ್ಲಿರುವ ಈ ಸಂದರ್ಭದಲ್ಲಿ ಗ್ರಾಮಸ್ಥರು ದೀಪಾವಳಿ ಹಬ್ಬ ಆಚರಿಸ ಬಾರದೆಂದು ನಿರ್ಧರಿಸಿ, ಯೋಧನ ಆತ್ಮಕ್ಕೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.