ಹರಿಯಾಣ: ರೋಹ್ಟಕ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್‌ನನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವವನ್ನು ಎಸೆದ ವ್ಯಕ್ತಿಯನ್ನು ಬಹದ್ದೂರ್‌ಗಢ್ ಸಮೀಪದ ಗ್ರಾಮದ ಸಚಿನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಹಿಮಾನಿ ಜತೆಗೆ ಸಚಿನ್ ಸಂಬಂಧದಲ್ಲಿದ್ದ ಎಂದು ತಿಳಿದುಬಂದಿದೆ.
ಹಿಮಾನಿ ರೋಹ್ಟಕ್‌ನ ವಿಜಯ್ ನಗರದಲ್ಲಿರುವ ತನ್ನ ನಿವಾಸದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹಿಮಾನಿ ಜತೆಗೆ ಸಂಪರ್ಕದಲ್ಲಿದ್ದ ಆರೋಪಿ ಆಗಾಗ್ಗೆ ಆಕೆಯನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದ.
ಫೆಬ್ರವರಿ 27 ರಂದು ಹಿಮಾನಿ ಮನೆಯಲ್ಲಿ ಆತ ತಂಗಿದ್ದ. 28ರಂದು ಹಿಮಾನಿ ಜತೆಗೆ ಸಚಿನ್‌ಗೆ ಹಣಕಾಸಿನ ವಿಚಾರವಾಗಿ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಹಿಮಾನಿಯನ್ನು ಮೊಬೈಲ್ ಚಾರ್ಜರ್‌ನ ವೈರ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಎಡಿಜಿಪಿ ಕೆಕೆ ರಾವ್ ಹೇಳಿದ್ದಾರೆ.
ಇನ್ನೂ ಆತ್ಮರಕ್ಷಣೆಗಾಗಿ ಸಚಿನ್ ಕೈಯಿಂದ ಬಚಾವ್ ಆಗಲು ಆತನ ಕೈಗೆ ಕಚ್ಚಿ, ಗೀರಿದ್ದಾಳೆ. ಹಿಮಾನಿಯನ್ನು ಹತ್ಯೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ರೋಹ್ಟಕ್ ಬಸ್ ನಿಲ್ದಾಣದ ಬಳಿ ಎಸೆದು ಹೋಗಿದ್ದಾನೆ ಎಂದು ಅಧಿಕಾರಿ ಹೇಳಿದರು.
ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಸಚಿನ್ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಚಿನ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ರೋಹ್ಟಕ್ ಪೊಲೀಸರ ವಿಶೇಷ ತನಿಖಾ ತಂಡವು ಆತನನ್ನು ನವದೆಹಲಿಯಿಂದ ಬಂಧಿಸಿದ್ದು, ಆತನನ್ನು ಹಿಡಿಯಲು ನಡೆಸಿದ ದಾಳಿಯ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿತ್ತು.