ಕಾರ್ಗಿಲ್ ಹುತಾತ್ಮನ ಪುತ್ರಿಗೆ ಎಬಿವಿಪಿಯಿಂದ ಅತ್ಯಾಚಾರ, ಹತ್ಯೆ ಬೆದರಿಕೆ

ಸೋಮವಾರ, 27 ಫೆಬ್ರವರಿ 2017 (11:06 IST)
ಕಾರ್ಗಿಲ್ ಹುತಾತ್ಮ ಕ್ಯಾಪ್ಟನ್ ಮನ್ದೀಪ್ ಸಿಂಗ್ ಮಗಳಿಗೆ ಎಬಿವಿಪಿ ಕಾರ್ಯಕರ್ತರು ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಒಡ್ಡಿದ ಆರೋಪ ಕೇಳಿ ಬಂದಿದೆ. 
ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ನಡೆದ ವಿಚಾರ ಸಂಕೀರಣದಲ್ಲಿ ಪಾಲ್ಗೊಳ್ಳುವಂತೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್‌ಗೆ(ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದ ಆರೋಪಿ) ಆಮಂತ್ರಣ ನೀಡಲಾಗಿತ್ತು. ಇದನ್ನು ವಿರೋಧಿಸಿ ಎಬಿವಿಪಿ, ಕಾಲೇಜು ಆವರಣದಲ್ಲಿ ಗಲಾಟೆ ನಡೆಸಿತ್ತು. ಎಬಿವಿಪಿ ಗೂಂಡಾಗಿರಿಯ ಕುರಿತು ತನ್ನ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಗುರ್ ಮೆಹರ್ ಕೌರ್‌ಗೆ ಎಬಿವಿಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. 
 
ಖಾಸಗಿ ಚಾನಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿರುವ ವಿದ್ಯಾರ್ಥಿನಿ ಗುರ್‌ವೆುಹರ್ ಕೌರ್, ನಾನು ಎಬಿವಿಪಿ ಸಂಘಟನೆ ಕುರಿತು ಮಾತನಾಡಿದ ಬಳಿಕ ನನಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಬಂದಿರುವುದಾಗಿ ಹೇಳಿದ್ದಾರೆ. 
 
ನನಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ನನ್ನನ್ನು ದೇಶದ್ರೋಹಿ ಎಂದು ಹಂಗಿಸುತ್ತಿದ್ದಾರೆ.ರಾಹುಲ್ ಎಂಬಾತ ನಾನು ನಿನ್ನನ್ನು ಹೇಗೆ ಅತ್ಯಾಚಾರ ಮಾಡುತ್ತೇನೆ ಎಂದು ವಿವರವಾಗಿ ಕಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದಾನೆ. ಇದೆಲ್ಲ ನನಗೆ ಅತಿಯಾದ ಭಯವನ್ನುಂಟು ಮಾಡುತ್ತಿದೆ- ಎಂದಾಕೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ. 
 
ಕೌರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಬಿವಿಪಿ ರಾಷ್ಟ್ರೀಯ ವಕ್ತಾರ ಸಾಕೇತ್ ಬಹುಗುಣ, ನಮ್ಮ ದೇಶದ ಸಮಗ್ರತೆಗೆ ಧಕ್ಕೆ ಬಂದರೆ ನಾವು ಅದನ್ನು ವಿರೋಧಿಸಿಯೇ ತೀರುತ್ತೇವೆ, ಎಂದಿದ್ದಾರೆ.
 
ರಾಮಜಾಸ್ ಕಾಲೇಜಿನಲ್ಲಿ ಗಲಾಟೆ ನಡೆದ ಬಳಿಕ ಕೌರ್, ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನನಗೆ ಎಬಿವಿಪಿ ಭಯವಿಲ್ಲ. ನಾನು ಒಬ್ಬಂಟಿ ಅಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ನನ್ನ ಜತೆ ಇದ್ದಾರೆ. #StudentsAgainstABVP"- ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಳು. 
 
ಈ ಪೋಸ್ಟ್ ವೈರಲ್ ಆಗಿ ಹರಿದಾಡಿದ್ದು 3,000 ಬಾರಿ ಹಂಚಿಕೆಯಾದ ಈ ಪೋಸ್ಟ್ ನಾಲ್ಕು ದಿನಗಳಲ್ಲಿ 10,000ಕ್ಕೂ ಹೆಚ್ಚು ಕಮೆಂಟ್‌ಗಳನ್ನು ಪಡೆದಿತ್ತು. ಕಮೆಂಟ್‌ಗಳಲ್ಲಿ ಆಕೆಯನ್ನು ಮನಬಂದಂತೆ ಬೈಯ್ಯಲಾಗಿತ್ತು.
 

ವೆಬ್ದುನಿಯಾವನ್ನು ಓದಿ