ಮನೆ ಅಳಿಯನಾಗಲೊಪ್ಪಿದರೆ ಮಾತ್ರ ಮಗಳ ಧಾರೆ ಎರೆಯುತ್ತಾರಿಲ್ಲಿ

ಗುರುವಾರ, 23 ಏಪ್ರಿಲ್ 2015 (18:04 IST)
ದಾಮಾದೋಂಕಾ ಪುರ್ವಾ ಎಂಬ ಹೆಸರಿನ ಈ ಮೊಹಲ್ಲಾದ ಜನರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದಿಲ್ಲ. ಬದಲಾಗಿ ಅಳಿಯಂದಿರನ್ನೇ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯವನ್ನು ಮೊಹಲ್ಲಾವಾಸಿಗಳು ಅನುಸರಿಸಿಕೊಂಡು ಬಂದಿದ್ದಾರೆ. 

ಉತ್ತರಪ್ರದೇಶದ ಕೌಸಂಬಿಯಲ್ಲಿ ಈ ಮೊಹಲ್ಲಾವಿದ್ದು 60 ಕುಟುಂಬಗಳು ಇಲ್ಲಿ ವಾಸವಾಗಿವೆ. 
 
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಈ ಪ್ರದೇಶದ ವಾಸಿಗಳಲ್ಲಿ ಹೆಚ್ಚಿನ ಜನರು ಹೊರಗಡೆಯಿಂದ ಬಂದು ನೆಲಸಿದವರಾಗಿದ್ದಾರೆ. ಅವರು ಹಾಲು ಡೈರಿ, ಕಿರಾಣಿ ಅಂಗಡಿ, ವ್ಯಾಪಾರ ಇತ್ಯಾದಿ ವೃತ್ತಿಗಳಲ್ಲಿ ತೊಡಗಿ ಕೊಂಡಿದ್ದಾರೆ. ಅವರು ಅನುಸರಿಸುವ ಮನೆಅಳಿಯ ಪದ್ಧತಿ ಮಾತ್ರ ಅಪರೂಪದ್ದು ಮತ್ತು ವಿಶೇಷವಾಗಿದೆ. 
 
ಮೂಲತಃ ಈ ಹಳ್ಳಿಯ ಹೆಸರು ಹಿಂಗಲ್ಪುರ್ ಎಂಬುದಾಗಿತ್ತು. ಕಳೆದ 30 ವರ್ಷಗಳ ಹಿಂದೆ ಅಲ್ಲಿನ ವ್ಯಕ್ತಿಯೊಬ್ಬ ತನ್ನ  ಮಗಳನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ತಮ್ಮ ಮನೆಯಲ್ಲೇ ವಾಸಿಸುವಂತೆ ಅಳಿಯನನ್ನು ಕೇಳಿಕೊಂಡ. ಅದಕ್ಕೊಪ್ಪಿದ ಆತ  ಮಾವನ ಜತೆ ಬ್ಯುಸಿನೆಸ್ ಮಾಡಿಕೊಂಡು ಅಲ್ಲೇ ಉಳಿದ. ಅವರಿಬ್ಬರು ವ್ಯವಹಾರದಲ್ಲಿ ಯಶಸ್ವಿಯಾಗುತ್ತಿದ್ದಂತೆ ಮೊಹಲ್ಲಾದ ಇತರ ಜನರು ಸಹ ಮನೆ ಅಳಿಯ ಪದ್ಧತಿಯನ್ನು ಅನುಸರಿಸತೊಡಗಿದರು ಮತ್ತು ಆ ಪ್ರದೇಶಕ್ಕೆ ಕೂಡ 'ದಾಮೋದೋಂಕಾ ಪೂರ್ವಾ' ಎಂಬ ಹೆಸರು ಬಂದಿತು. 

ವೆಬ್ದುನಿಯಾವನ್ನು ಓದಿ