ವಿಶೇಷ ಸ್ಥಾನಮಾನದ ಬದಲು ಆಂಧ್ರಕ್ಕೆ ಹಳಸಿದ ಲಡ್ಡುಗಳು: ಪವನ್ ಕಲ್ಯಾಣ್

ಶನಿವಾರ, 10 ಸೆಪ್ಟಂಬರ್ 2016 (15:44 IST)
ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ರಾಜ್ಯ ಸ್ಥಾನಮಾನ ನಿರಾಕರಿಸಿದ ಕೇಂದ್ರ ಸರ್ಕಾರವು ಜನರ ಹೊಟ್ಟೆಗೆ ಚೂರಿ ಹಾಕಿದೆಯೆಂದು ತೆಲುಗು ಚಿತ್ರನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಶುಕ್ರವಾರ ಕೇಂದ್ರಸರ್ಕಾರದ ವಿರುದ್ಧ ತೀಕ್ಷ್ಣ  ವಾಗ್ದಾಳಿ ಮಾಡಿದರು.
 
ಕಾಂಗ್ರೆಸ್ ಆಂಧ್ರಪ್ರದೇಶವನ್ನು ವಿಭಜಿಸಿ ಜನರ ಬೆನ್ನಿಗೆ ಚೂರಿ ಹಾಕಿತ್ತು. ನಾವು ನ್ಯಾಯ ಕೇಳಿದಾಗ ಬಿಜೆಪಿ ಹೊಟ್ಟೆಗೆ ಚೂರಿ ಹಾಕಿತು ಎಂದು ಕಲ್ಯಾಣ್ ವಾಗ್ದಾಳಿ ಮಾಡಿದರು. ಕಾಕಿನಾಡಾ ಪಟ್ಟಣದಲ್ಲಿ ಆಂಧ್ರುಲಾ ಆತ್ಮ ಗೌರವ ಸಭಾದ ರಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
 
ಜನರ ಕಣ್ಣಿಗೆ ಮಣ್ಣೆರಚಿ 14ನೇ ಹಣಕಾಸು ಆಯೋಗ, ಸಂವಿಧಾನ ಮತ್ತಿತರ ಹೆಸರಿನಲ್ಲಿ ನೆಪಗಳನ್ನು ಒಡ್ಡುವ ಬದಲಿಗೆ ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನ ನೀಡುತ್ತದೋ ಇಲ್ಲವೋ ಎಂದು ಸ್ಪಷ್ಟವಾಗಿ ತಿಳಿಸಬೇಕು ಎಂದರು.
 
ಜನರು ಅರ್ಥಮಾಡಿಕೊಳ್ಳದ ಭಾಷೆಯಲ್ಲಿ ಮಾತನಾಡಬೇಡಿ. ಆಂಧ್ರ ಜನರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಬಯಸುತ್ತಿದ್ದು, ಅವರನ್ನು ಎರಡು ವರ್ಷಗಳ ಕಾಲ ಆಶಾವಾದಿಯಾಗಿ ಇರಿಸಿದ ಬಳಿಕ, ಕೇಂದ್ರ ಸರ್ಕಾರವು ಅಂತಿಮವಾಗಿ ಅವರ ಕೈಗಳಲ್ಲಿ ಎರಡು ಹಳಸಿದ ಲಡ್ಡುಗಳನ್ನು ಇರಿಸಿತು ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ