ನವದೆಹಲಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಇತರ ರಾಜ್ಯಗಳಲ್ಲಿ ಸಹ ತನ್ನ ಛಾಪನ್ನು ಮೂಡಿಸಲು ಸತಾಯಗತಾಯ ಪ್ರಯತ್ನಿಸುತ್ತಿದೆ. ಅದರಲ್ಲೂ ಪಂಜಾಬ್‌ನಲ್ಲಿ ಆಪ್ ಪ್ರಭಾವ ಹೆಚ್ಚುತ್ತಿದ್ದು ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಬೇಕು ಎಂದು ಆಪ್ ತಲಾಶ್ ನಡೆಸುತ್ತಿದೆ.
ಮತ್ತೀಗ ಆಪ್ ರಾಷ್ಟ್ರೀಯ ಸಂಚಾಲಕ, ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಪಂಜಾಬ್‌ನಲ್ಲಿ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.
ಮೊಹಾಲಿಯಲ್ಲಿ ನಡೆದ ಪಕ್ಷದ ರ‍್ಯಾಲಿಯನ್ನುದ್ದೇಶಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಡಿರುವ ಮಾತುಗಳು ಇದಕ್ಕೆ ಮತ್ತಷ್ಟು ಇಂಬು ನೀಡಿವೆ.
ಹೌದು, ಸಿಸೋಡಿಯಾ ಕೇಜ್ರಿವಾಲ್ ಪಂಜಾಬ್ ಸಿಎಂ ಅಭ್ಯರ್ಥಿ ಎಂದು ಪ್ರಸ್ತಾಪ ಮಾಡಿದ್ದಾರೆ. ಅರವಿಂದ ಕೇಜ್ರಿವಾರ್ ಪಂಜಾಬ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿಕೊಂಡು ನಮ್ಮ ಪಕ್ಷಕ್ಕೆ ಮತ ಚಲಾಯಿಸಿ ಎಂದು ಹೇಳುವ ಮೂಲಕ ಅವರು ರಾಜಕೀಯ ವಲಯದಲ್ಲಿ ಹೊಸ ಕುತೂಹಲವನ್ನು ತಂದಿಟ್ಟಿದ್ದಾರೆ.
ಆದರೆ ಬಳಿಕ ಈ ಕುರಿತು ಪತ್ರಕರ್ತರು ಸ್ಪಷ್ಟನೆ ಕೇಳಿದಾಗ , ನೀವೇಕೆ ನನ್ನನ್ನು ಪ್ರಶ್ನಿಸುತ್ತೀರಿ. ಅದನ್ನು ನಿರ್ಣಯಿಸುವವರು ಶಾಸಕರು ಎಂದು ಹೇಳುವ ಮೂಲಕ ಅವರು ಕುತೂಹಲವನ್ನು ಕಾದಿಟ್ಟಿದ್ದಾರೆ.
ಆದರೆ ಪಂಜಾಬ್ ಕಡೆ ಗಮನ ಹರಿಸಲು ಕೇಜ್ರಿವಾಲ್ ದೆಹಲಿ ಪಟ್ಟ ತೊರೆಯುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ