ಜಯಲಲಿತಾ ಆಪ್ತೆ ಶೀಲಾ ಬಾಲಕೃಷ್ಣನ್ ರಾಜೀನಾಮೆ

ಶನಿವಾರ, 4 ಫೆಬ್ರವರಿ 2017 (12:54 IST)
ತಮಿಳುನಾಡು ರಾಜಕಾರಣದಲ್ಲಾಗಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ ಜಯಲಲಿತಾ ಆಪ್ತೆ, ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ (62) ಶುಕ್ರವಾರ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.

ಮುಖ್ಯಮಂತ್ರಿಯ ಕಾರ್ಯದರ್ಶಿಗಳಾಗಿದ್ದ, ಜಯಾ ಆವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಎನ್ ವೆಂಕಟರಮಣನ್, ಎ ರಾಮಲಿಂಗಮ್ ಅವರಿಗೂ ಗೇಟ್ ಪಾಸ್ ನೀಡಲಾಗಿದೆ.
 
ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಮತ್ತಿಬ್ಬರು ಅಧಿಕಾರಿಗಳಿಗೆ ಸ್ಥಾನ ತ್ಯಜಿಸುವಂತೆ ಸರ್ಕಾರದ ಕಡೆಯಿಂದಲೇ ಸೂಚಿಸಲಾಗಿದೆ. ಈ ಮೂವರು ಅಧಿಕಾರಿಗಳು ಜಯಾ ಆಪ್ತರಾಗಿರುವುದು ಇಲ್ಲಿ ಗಮನಾರ್ಹ ಸಂಗತಿ.
 
ಈ ಮೂವರು ಅಧಿಕಾರಿಗಳ ಅನೌಪಚಾರಿಕ ನಿರ್ಗಮನವನ್ನು ಪ್ರಸ್ತುತ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯದ ಫಲಿತಾಂಶ ಎಂಬಂತೆ ನೋಡಲಾಗುತ್ತಿದೆ.
 
2014ರ ಮಾರ್ಚ್ ತಿಂಗಳಲ್ಲಿ ನೇಮಕವಾಗಿದ್ದ ಶೀಲಾ ಬಾಲಕೃಷ್ಣನ್ ಜಯಲಲಿತಾ ಅವರು ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ  ಸುಮಾರು 75 ದಿನಗಳ ಕಾಲ ತಮಿಳುನಾಡು ಸರ್ಕಾರದ ಕಾರ್ಯ ಚಟುವಟಿಕೆಯನ್ನು ಶೀಲಾ ಸಮರ್ಥವಾಗಿ ನಿರ್ವಹಿಸಿದ್ದರು. ಅನಾರೋಗ್ಯಕ್ಕೀಡಾಗಿ ಜಯಾ ದಾಖಲಾಗಿದ್ದ ಕೋಣೆಯ ಪಕ್ಕದಲ್ಲಿ ಬೀಡು ಬಿಟ್ಟಿದ್ದ ಅವರು ರಾಜ್ಯವನ್ನು ಸಂಭಾಳಿಸಿದ್ದರು. 

ಇನ್ನೊಂದೆಡೆ ಎಐಡಿಎಂಕೆ  ಪ್ರಧಾನ ಕಾರ್ಯದರ್ಶಿ, ಜಯಾ ಆಪ್ತೆ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆ ಎನ್ನಲಾಗುತ್ತಿದೆ. 
 

ವೆಬ್ದುನಿಯಾವನ್ನು ಓದಿ