ಇಂಡಿಯಾಗಾಗಿ ಪೂಜೆ: ಪಂಚೆ ಶಲ್ಯ ತೊಟ್ಟ ಜಾಂಟಿ ರೋಡ್ಸ್

ಮಂಗಳವಾರ, 3 ಮೇ 2016 (09:24 IST)
ಜಾಂಟಿ ರೋಡ್ಸ್ ಅಂದರೆ ನೆನಪಿಗೆ ಬರೋದು ಅಸಾಮಾನ್ಯ ಫಿಲ್ಡಿಂಗ್. ದಕ್ಷಿಣ ಅಫ್ರಿಕಾದ ಈ ಮಾಜಿ ಕ್ರಿಕೆಟಿಗನಿಗೆ ಭಾರತ, ಇಲ್ಲಿನ ಸಂಸ್ಕೃತಿ ಎಂದರೆ ಆಪಾರ ಅಭಿಮಾನ. ಈ ವ್ಯಾಮೋಹದಿಂದಾಗಿಯೇ ಕಳೆದ ವರ್ಷ ಭಾರತದಲ್ಲಿಯೇ ಹುಟ್ಟಿದ್ದ ತಮ್ಮ ಮಗಳಿಗೆ ಅವರು ‘ಇಂಡಿಯಾ’ ಎಂಬ ಹೆಸರನ್ನಿಟ್ಟಿದ್ದರು.
 
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್ ಈಗ ತಮ್ಮ ಮಕ್ಕಳು ಮತ್ತು ಪತ್ನಿಯರೊಂದಿಗೆ ಭಾರತದಲ್ಲಿದ್ದಾರೆ.
 
ಹಿಂದೂ ದೇವರನ್ನು ಅಪಾರವಾಗಿ ನಂಬುವ ಅವರು ಕಳೆದೆರಡು ದಿನಗಳ ಹಿಂದೆ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪೇಜಾವರ ಮಠದಲ್ಲಿ ಸಪರಿವಾರ ಸಮೇತರಾಗಿ ಪೂಜೆ ಸಲ್ಲಿಸಿದರು. ತಮ್ಮ ಪುಟ್ಟ ಕಂದಮ್ಮ ‘ಇಂಡಿಯಾ’ ಗೆ ಒಳಿತಾಗಲೆಂದು ಕೋರಿ ಅವರು ಪೂಜೆಯನ್ನು ನೆರವೇರಿಸಿದರು. 
 
ಪಕ್ಕಾ ಭಾರತೀಯ ಸಂಪ್ರದಾಯದಂತೆ  ಪಂಚೆ ತೊಟ್ಟು ಶಲ್ಯ ಹೊದ್ದು ಕೊಂಡಿದ್ದ ಜಾಂಟಿ ರೋಡ್ಸ್, ಪುರೋಹಿತರ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ್ದಾರೆ. ಅವರ ಭಕ್ತಿ ನೋಡಿ ಅರ್ಚಕರೇ ದಂಗಾಗಿ ಹೋಗಿದ್ದಾರೆ.
 
ಕಳೆದ ವರ್ಷ ಐಪಿಎಲ್ ಸಂದರ್ಬದಲ್ಲಿ ಭಾರತದಲ್ಲೇ ಜನಿಸಿದ್ದ ಮಗಳಿಗೆ 'ಇಂಡಿಯಾ' ಎಂದು ಹೆಸರಿಡುವುದರ ಮೂಲಕ ರೋಡ್ಸ್ ಭಾರತದ ಮೇಲಿನ ತಮ್ಮ ಪ್ರೇಮವನ್ನು ಜಗಜ್ಜಾಹೀರುಗೊಳಿಸಿದ್ದರು. 
 
ಭಾರತವೆಂದರೆ ಭೂಮಿಯ ಮೇಲಿನ ಸ್ವರ್ಗ ಎನ್ನುವ ಅವರು ತಮ್ಮ ದೇಶ  ದಕ್ಷಿಣ ಆಫ್ರಿಕಾದಲ್ಲಿರುವುದಕ್ಕಿಂತ ಹೆಚ್ಚಾಗಿ ಭಾರತದಲ್ಲಿಯೇ ಇರಲು ಹೆಚ್ಚು ಇಷ್ಟ ಪಡುತ್ತಾರೆ. ಮತ್ತು ಇಲ್ಲಿ ಬಂದಾಗಲೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. 
 
ಇತ್ತೀಚಿಗೆ ಅವರು ತಮಿಳುನಾಡಿನ ಅಣ್ಣಾ ಮಲೈ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 

ವೆಬ್ದುನಿಯಾವನ್ನು ಓದಿ