ಮೇಘಸ್ಫೋಟ, ಭೂಕುಸಿತಕ್ಕೆ ಬೆಚ್ಚಿದ ಕಾಶ್ಮೀರ: ಒಂದೇ ಕುಟುಂಬದ ಏಳು ಮಂದಿ ಬಲಿ

Sampriya

ಶನಿವಾರ, 30 ಆಗಸ್ಟ್ 2025 (14:34 IST)
Photo Credit X
ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಮೇಘಸ್ಫೋಟ ಮುಂದುವರಿದಿದೆ. ರಂಬನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾವು–ನೋವು ಸಂಭವಿಸಿದೆ.

ಮೇಘಸ್ಫೋಟದಲ್ಲಿ ಮೂವರು ಮೃತಪಟ್ಟು ಇಬ್ಬರು ಕಣ್ಮರೆಯಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ರಿಯಾಸಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಏಳು ಜನರು ಮೃತಪಟ್ಟಿದ್ದಾರೆ.

ರಂಬನ್ ಜಿಲ್ಲೆಯ ರಾಜ್‌ಗಢ ತಹಸಿಲ್‌ನಲ್ಲಿ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ . ಇದರಿಂದಾಗಿ ಹಲವಾರು ಮನೆಗಳು ಧರಾಶಾಯಿಯಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಇಬ್ಬರನ್ನು ರಕ್ಷಿಸಲು ಎಸ್ ಡಿಆರ್ ಎಫ್, ಪೊಲೀಸ್, ಸ್ಥಳೀಯ ನಾಗರಿಕ ಸರ್ಕಾರಿ ಸಂಸ್ಥೆಗಳು ಮತ್ತು ನಿವಾಸಿಗಳ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.

ರಿಯಾಸಿ ಜಿಲ್ಲೆಯ ಮಹೋರ್ ಪ್ರದೇಶದ ಬದರ್ ಗ್ರಾಮದಲ್ಲಿ ಭಾರೀ ಮಳೆಯಿಂದ ಭಾರೀ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದ ಒಂದು ಮನೆ ನೆಲಸಮವಾಗಿದ್ದು, ದಂಪತಿ ಮತ್ತು ಅವರ ಐವರು ಮಕ್ಕಳು ಸೇರಿದಂತೆ ಒಳಗೆ ಇದ್ದ ಏಳು ಜನರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಕಳೆದ ಹದಿನೈದು ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಲವಾರು ಮೇಘಸ್ಫೋಟ ಘಟನೆಗಳು ಸಂಭವಿಸಿದ್ದು, ಸಾಕಷ್ಟು ಜೀವ ಹಾನಿಯಾಗಿದೆ. ಆಗಸ್ಟ್ 14 ರಂದು, ಮಾತಾ ಮಚೈಲ್ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ, ಪರ್ವತಮಯ ಕಿಶ್ತ್ವಾರ್ ಜಿಲ್ಲೆಯ ದೂರದ ಚೆಸೋಟಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿ 68 ಜನರು ಮೃತಪಟ್ಟಿದ್ದರು. 

ಆಗಸ್ಟ್ 26 ರಂದು, ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಾರಿ ಮೇಘಸ್ಫೋಟದಿಂದ ಉಂಟಾದ ಭೂಕುಸಿತದಿಂದ 34 ಜನರು ಮೃತಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ