ಭಾರತದ ನಡೆಗೆ ಮನೀಶ್ ತಿವಾರಿ ಆಕ್ಷೇಪ

ಭಾನುವಾರ, 27 ಫೆಬ್ರವರಿ 2022 (08:51 IST)
ನವದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸದೇ ಭಾರತ ತಟಸ್ಥ ನೀತಿಯನ್ನು ಅನುಸರಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
 
ನಮ್ಮ ಕಷ್ಟಗಳಲ್ಲಿ ರಷ್ಯಾ ನಮ್ಮ ಬೆಂಬಲಕ್ಕೆ ನಿಂತಿದೆ. ಆದರೆ ಸ್ನೇಹಿತ ತಪ್ಪು ಮಾಡಿದರೆ, ನಾವು ಆತನನ್ನು ಸರಿಪಡಿಸಬೇಕು. ಒಂದು ಕಡೆ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ರಾಷ್ಟ್ರಗಳು ಮತ್ತು ಇತರರು ನಿರಂಕುಶ ಮಾರ್ಗವನ್ನು ಬೆಂಬಲಿಸುವ ಸಂದರ್ಭದಲ್ಲಿ ಭಾರತ ತನ್ನ ಪಕ್ಷವನ್ನು ಆರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾರತದ ಅಲಿಪ್ತ ಆಂದೋಲನ ನೀತಿ 1991 ರಿಂದ ಕ್ರಮೇಣ ಕೊನೆಗೊಂಡಿದೆ. ಈಗಲೂ ಭಾರತವು ಅದೇ ನೀತಿಗೆ ಮರಳಲು ಯೋಚಿಸಿದರೆ ಅದು ತಪ್ಪಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತೀಯ ಕಾಲಮಾನ ಶನಿವಾರ ನಸುಕಿನ ಜಾವ ಸಭೆ ಆಯೋಜಿಸಲಾಗಿತ್ತು. ಅಮೆರಿಕ ಮತ್ತು ಆಲ್ಬೇನಿಯಾ ಸಂಯುಕ್ತವಾಗಿ ಮಂಡಿಸಿದ ನಿರ್ಣಯದ ಮೇಲೆ ಮತದಾನ ನಡೆದಿತ್ತು.

ಭಾರತ, ಚೀನಾ, ಯುಎಇ ದೇಶಗಳು ಮತದಾನದಿಂದ ದೂರ ಉಳಿದಿದ್ದರೆ ಪೋಲೆಂಡ್, ಇಟಲಿ, ನ್ಯೂಜಿಲೆಂಡ್ ಸೇರಿ 11 ದೇಶಗಳು ನಿರ್ಣಯದ ಪರವಾಗಿ ಮತ ಹಾಕಿವೆ. ರಷ್ಯಾ ದೇಶ ಊಹಿಸಿದಂತೆಯೇ ವಿಟೋ ಅಧಿಕಾರ ಚಲಾಯಿಸಿ, ನಿರ್ಣಯ ಪಾಸ್ ಆಗದಂತೆ ತಡೆದಿದೆ. ಈ ಬಗ್ಗೆ ಅಮೆರಿಕ ಆಕ್ರೋಶ ಹೊರಹಾಕಿದೆ. ಈ ವಿಚಾರವನ್ನು ಸಾಮಾನ್ಯ ಸಭೆಗೆ ಕೊಂಡೊಯ್ಯುವುದಾಗಿ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ