300ಕ್ಕೂ ಅಧಿಕ ನಕ್ಸಲರಿಂದ ಗುಂಡಿನ ದಾಳಿ: 24 ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮ
ಸೋಮವಾರ, 24 ಏಪ್ರಿಲ್ 2017 (18:42 IST)
ಸಿಆರ್`ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ 24 ಸಿಆರ್`ಪಿಎಫ್ ಯೋಧರು ಹುತಾತ್ಮರಾದ ಘಟನೆ ಛತ್ತೀಸ್ ಗಢದ ಸುಖ್ಮಾ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ, 6 ಯೋಧರು ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಬಸ್ತಾರ್ ವಲಯದ ನಕ್ಸಲ್ ಚಟುವಟಿಕೆ ಇರುವ ಬುರ್ಕಾಪಾಲ್-ಚಿಂತಾಗುಫಾ ನಡುವಿನ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನಕ್ಸಲರಿಂದ ಸಿಆರ್`ಪಿಎಫ್ ಪಡೆ ಮೇಲೆ ದಾಳಿ ನಡೆದಿದೆ. 7 ಅಧಿಕಾರಿಗಳು ನಾಪತ್ತೆಯಾಗಿದ್ದು, ನಕಸಲರು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯಾಹ್ನ 12.30 ಸುಮಾರಿಗೆ ಈ ಘಟನೆ ನಡೆದಿದ್ದು, ಗಾಯಗೊಂಡ ಯೋಧರನ್ನ ಹೆಲಿಕಾಪ್ಟರ್ ಮೂಲಕ ರಾಯ್ ಪುರ್, ಜಗದಲ್ಪುರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಸಿಎಂ ರಮಣ್ ಸಿಂಗ್ ಉನ್ನತಾಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹಂಸರಾಜ್ ಅಹೀರ್ ಸಹ ರಾಯಪುರಕ್ಕೆ ತೆರಳಿದ್ದಾರೆ.