ಪಂಜಾಬ್ ನಲ್ಲಿ ಮೆರವಣಿಗೆ ವೇಳೆ ಘರ್ಷಣೆ: ಪೊಲೀಸರಿಂದ ಗಾಳಿಯಲ್ಲಿ ಗುಂಡು
ಖಾಲಿಸ್ತಾನಿ ಪ್ರತ್ಯೇಕವಾದಿಗಳ ವಿರುದ್ದದ ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಘಟನೆ ಶುಕ್ರವಾರ ಪಂಜಾಬಿನ ಪಟಿಯಾಲದ ಕಾಳಿ ದೇವಾಲಯದ ಬಳಿ ನಡೆದಿದೆ.
ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಬಸ್ ಗೆ ಬೆಂಕಿ ಹಚ್ಚಿದ್ದರಿಂದ ಒಬ್ಬ ಬಸ್ ಕಂಡಕ್ಟರ್ ಮೃತಪಟ್ಟಿದ್ದು, ಮೂರು ಬಸ್ ಗಳು ಆಹುತಿಯಾಗಿದ್ದವು.
ಶಿವಸೇನೆ ಕಾರ್ಯಕರ್ತರು ಕಾಳಿ ದೇವಸ್ಥಾನ ಬಳಿ ಬರುತ್ತಿದ್ದಂತೆ ಖಾಲಿಸ್ತಾನ ಪ್ರತ್ಯೇಕವಾದಿಗಳ ವಿರುದ್ಧ ಘೋಷಣೆ ಕೂಗಿದ್ದರಿಂದ ಘರ್ಷಣೆ ಆರಂಭವಾಗಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇದು ದುರದೃಷ್ಟಕರ ಸಂಗತಿ ಮತ್ತು ತಮ್ಮ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಘಟನೆ ಕುರಿತು ಡಿಜಿಪಿಯೊಂದಿಗೆ ಚರ್ಚಿಸಿದ್ದೇನೆ ಘಟನೆ ನಡೆದ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹೇಳಿದ್ದೇನೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಬಿಡುವುದಿಲ್ಲ. ಪಂಜಾಬಿನಲ್ಲಿ ಶಾಂತಿ ಸೌಹಾರ್ದತೆ ಅತ್ಯಂತ ಮಹತ್ವವಾದ್ದು ಎಂದು ಟ್ವೀಟ್ ನಲ್ಲಿ ವಿವರಿಸಿದ್ದಾರೆ.
ಪರಿಸ್ಥಿತಿ ಸದ್ಯ ಹತ್ತೋಟಿಗೆ ಬಂದಿದ್ದು ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಆ ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಜಿಲ್ಲೆಯ ಜನರು ಅಹಿತಕರ ಘಟನೆಗಳು ಆಗದಂತೆ ಶಾಂತಿ ಕಾಪಾಡುವಂತೆ ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಾಕ್ಷಿ ಸಾಹಿ ಮನವಿ ಮಾಡಿದ್ದಾರೆ.