ಉತ್ತರಪ್ರದೇಶದ ಬಿಜೆಪಿ ಗೆಲುವಿನ ಸೀಕ್ರೇಟ್ ಬಿಚ್ಚಿಟ್ಟ ಮಾಯಾವತಿ?
ಶನಿವಾರ, 11 ಮಾರ್ಚ್ 2017 (14:02 IST)
ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರೆಯುತ್ತಿದ್ದಂತೆ ಬಿಎಸ್`ಪಿ ವರಿಷ್ಠೆ ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಮತಯಂತ್ರಗಳ ದೋಷವಿತ್ತು. ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಹೋಗುತ್ತಿತ್ತು ಎಂದು ಮಾಯಾವತಿ ಆರೋಪಿಸಿದ್ದಾರೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕಡೆಗಳಲ್ಲಿ ಬಿಜೆಪಿ ಮತ ಹೋಗಲು ಹೇಗೆ ಸಾಧ್ಯ? ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿರುವ ಬಗ್ಗೆ ಕಂಗೆಟ್ಟಿರುವ ಮಾಯಾವತಿ ಈ ಬಾಂಬ್ ಸಿಡಿಸಿದ್ದಾರೆ. ಆದರೆ, ಚುನಾಚಣೆ ದಿನದಿಂದ ಸುಮ್ಮನಿದ್ದ ಮಾಯಾವತಿ ಇಷ್ಟು ತಡವಾಗಿ ಫಲಿತಾಂಶದ ದಿನದಂದು ಆರೋಪ ಮಾಡುತ್ತಿರುವುದರಿಂದ ಅವರ ಹೇಳಿಕೆ ಅನುಮಾನ ಮೂಡಿಸಿದೆ.
ಅಮಿತ್ ಶಾ ಪ್ರಾಮಾಣಿಕರಾಗಿದ್ದರೆ ಫಲಿತಾಂಶ ರದ್ದು ಮಾಡಿ ಮರು ಚುನಾವಣೆಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿ. 3 ತಿಂಗಳಲ್ಲಿ ಮರು ಚುನಾವಣೆ ನಡೆಯಲಿ, ಇವಿಎಂ ಬಿಟ್ಟು ಬ್ಯಾಲೆಟ್ ಪೇಪರಿನಲ್ಲಿ ಮತದಾನ ನಡೆಯಲಿ. ಬಿಜೆಪಿ ಪ್ರಜಾಪ್ರಭುತ್ವವನ್ನ ಕೊಲೆ ಮಾಡಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ 80 ಸೀಟ್ ಗಳಿಸಿದ್ದ ಮಾಯಾವತಿ ನೇತೃತ್ವದ ಬಿಎಸ್`ಪಿ ಈ ಬಾರಿ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಕೊನೆಯ ಸ್ಥಾನಕ್ಕೆ ಕುಸಿದಿದೆ. ಹತ್ತಿರತ್ತಿರ 80 ಸ್ಥಾನಗಳನ್ನ ಗಳಿಸಿರುವ ಕಾಂಗ್ರೆಸ್ ಮತ್ತು ಎಸ್ಪಿ ಮೈತ್ರಿ 2ನೇ ಸ್ಥಾನದಲ್ಲಿದೆ. 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.