ಅಪ್ರಾಪ್ತ ಬಾಲಕಿಯ ಮೇಲೆ ರೇಪ್: ಬಾಲಕಿ ನಿವಾಸಕ್ಕೆ ಭೇಟಿ ನೀಡಿದ ಕೇಜ್ರಿವಾಲ್

ಗುರುವಾರ, 26 ಮೇ 2016 (11:35 IST)
ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ನಂತರ ಆಕೆಯನ್ನು ರೈಲ್ವೆ ಹಳಿಗಳ ಮೇಲೆ ಎಸೆದು ಪರಾರಿಯಾಗಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ದೆಹಲಿಯ ಪುಲ್ ಪ್ರಹ್ಲಾದ್‌ಪುರ್‌ ಪ್ರದೇಶದಿಂದ ವರದಿಯಾಗಿದೆ. 
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅತ್ಯಾಚಾರಕ್ಕೊಳಗಾದ ಬಾಲಕಿಯ ಪೋಷಕರನ್ನು ಭೇಟಿ ಮಾಡಿ ಸಂತೈಸಿದರು. ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
 
ಏತನ್ಮಧ್ಯೆ, ದೆಹಲಿ ಮಹಿಳಾ ಆಯೋಗ ಪ್ರಹ್ಲಾದ್‌ಪುರ್ ಪೊಲೀಸ್ ಠಾಣೆಗೆ ನೋಟಿಸ್ ಜಾರಿಗೊಳಿಸಿ, 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 
ಅನಾಥೆ ಮತ್ತು ಮಾನಸಿಕವಾಗಿ ಅಸ್ವಸ್ಥಳಾಗಿರುವ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೀಗ ಬಾಲಕಿಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 
 
ಅತ್ಯಾಚಾರಕ್ಕೊಳಗಾದ ಬಾಲಕಿ ಪ್ರಹ್ಲಾದ್‌ಪುರದಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಳು ಕಳೆದ ಮೇ 17 ರಿಂದ ಮನೆಯಿಂದ ಕಾಣೆಯಾಗಿದ್ದಳು. ಆಕೆಯ ಚಿಕ್ಕಪ್ಪನ ಕುಟುಂಬದವರು ತುಂಬಾ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.  ಮೇ 18 ರಂದು ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ರೈಲ್ವೆ ಹಳಿಯ ಬಳಿ ಪತ್ತೆಯಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ