ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಆಪ್

ಸೋಮವಾರ, 1 ಆಗಸ್ಟ್ 2016 (16:08 IST)
ನರೇಲಾ ಶಾಸಕ ಶರದ್ ಚೌಹಾನ್ ಬಂಧನದೊಂದಿಗೆ ಇಲ್ಲಿಯವರೆಗೆ ಬಂಧನಕ್ಕೊಳಗಾದ ಆಪ್ ಶಾಸಕರ ಸಂಖ್ಯೆ 12ಕ್ಕೇರಿದ್ದು, ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ದೆಹಲಿಯ ಆಡಳಿತಾ ರೂಢ ಪಕ್ಷ ಕಿಡಿಕಾರಿದೆ.  ಪ್ರಧಾನಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿರುವ ಆಪ್ ಇಂತಹ ಪ್ರತೀಕಾರ ತೀರಿಸಿಕೊಳ್ಳುವ ಮನುಷ್ಯನ ಕೈಯ್ಯಲ್ಲಿ ದೇಶ ಸುರಕ್ಷಿತವಾಗಿರಲು ಸಾಧ್ಯವೇ? ಎಂದು ಗುಡುಗಿದೆ.

ಪ್ರತಿ ಕ್ಷಣವನ್ನು ಮೋದಿ ರಾಜಕೀಯ ಶತ್ರುಗಳ ವಿರುದ್ಧ ಸಂಚು ರೂಪಿಸಲು ವ್ಯಯಿಸುತ್ತಾರೆ. ರಾಜಕೀಯ ಪೀಡನೆ ನೀಡುವುದರಲ್ಲೇ ಮೋದಿ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎಂದು ಆಪ್ ನಾಯಕ ಆಶಿಷ್ ಖೇತನ್ ಆರೋಪಿಸಿದ್ದಾರೆ.

ಮೋದಿ ಅವರು ಈ ದೇಶದ ಪ್ರಧಾನಿಯಾಗಲು ಸಂಪೂರ್ಣವಾಗಿ ಅನರ್ಹರು.  ತಮ್ಮ ಪ್ರತಿ ಕ್ಷಣವನ್ನು ರಾಜಕೀಯ ಶತ್ರುಗಳನ್ನು ಮಟ್ಟ ಹಾಕಬೇಕೆಂಬ ದುರುದ್ದೇಶದಲ್ಲಿಯೇ ಕಳೆಯುವ ವ್ಯಕ್ತಿಯ ಕೈಯ್ಯಲ್ಲಿ ದೇಶದ ಆಡಳಿತ ಸುರಕ್ಷಿತ ಎಂದು ಹೇಗೆ ವಿಶ್ವಾಸವಿಡಲು ಸಾಧ್ಯ. ಈ ವ್ಯಕ್ತಿ ಮಾನಸಿಕವಾಗಿ ಮತ್ತು ಸ್ವಭಾವದಿಂದ ದೇಶವನ್ನು ಮುನ್ನಡೆಸಲು ಸಮರ್ಥರೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಅವರು ನಡೆಸುತ್ತಿರುವ ಸೇಡಿನ ರಾಜಕೀಯದ ಆಳ್ವಿಕೆ ದೇಶಕ್ಕೆ ಅಪಾಯಕಾರಿ. ವ್ಯವಸ್ಥಿತವಾಗಿ ಅವರು ವಿರೋಧಿಗಳನ್ನು ಗುರಿಯಾಗಿಸುತ್ತಿದ್ದಾರೆ. ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ, ಇತರ ಅಧಿಕಾರಿಗಳು, ಅಥವಾ ದೆಹಲಿಯಲ್ಲಿ ಎಎಪಿ ಸರ್ಕಾರದ ವಿರುದ್ಧದ ಕ್ರಮಗಳೇ ಇದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.

ಆಪ್ ಕಾರ್ಯಕರ್ತೆಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚೌಹಾನ್ ಅವರನ್ನು ಬಂಧಿಸಿದ್ದಾರೆ. ಅವರ ಬಂಧನದೊಂದಿಗೆ ಇಲ್ಲಿಯವರೆಗೆ ಬಂಧನಕ್ಕೊಳಗಾದ ಆಪ್ ಶಾಸಕರ ಸಂಖ್ಯೆ 12ಕ್ಕೇರಿದೆ.

ಈ ಹಿಂದೆ ಕೇಜ್ರಿವಾಲ್ ಸಹ ಪ್ರಧಾನಿ ಮೋದಿಯನ್ನು ಮನೋವಿಕೃತಿ ಹೊಂದಿದ ವ್ಯಕ್ತಿ ಎಂದು ಜರಿದಿದ್ದರು.

ವೆಬ್ದುನಿಯಾವನ್ನು ಓದಿ