ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ-ಉಕ್ರೇನ್ ಬಿಕಟ್ಟಿನ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ ರ್ಯಾಲಿ ಮುಗಿಸಿ ರಾಷ್ಟ್ರ ರಾಜಧಾನಿಗೆ ಬಂದ ಕೂಡಲೇ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಉಕ್ರೇನ್ನಲ್ಲಿ ರಷ್ಯಾ ದಾಳಿಯಿಂದ ಉಂಟಾಗಿರುವ ಪರಿಣಾಮ, ದಿನನಿತ್ಯದ ಬೆಳವಣಿಗೆಳು, ಮುಂದಿನ ಅಪಾಯ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಅದರಲ್ಲೂ, ಉಕ್ರೇನ್ ವಾಯುಮಾರ್ಗ ಸ್ಥಗಿತವಾದರೂ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದವರ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಉಕ್ರೇನ್ ನೆರೆ ರಾಷ್ಟ್ರಗಳ ಜತೆಗೆ ಮಾತುಕತೆ ಕುರಿತು ಸಹ ಚರ್ಚಿಸಿದ್ದಾರೆ.
ದೇಶವಾಸಿಗಳ ರಕ್ಷಣೆಗೆ ಸಕಲ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.