ವಿಪಕ್ಷಗಳು ಒಂದಾದ್ರೆ ಮೋದಿ ಎಲ್ಲಿಯೂ ಕಾಣೋಲ್ಲ: ರಾಹುಲ್ ವಾಗ್ದಾಳಿ

ಶುಕ್ರವಾರ, 18 ಆಗಸ್ಟ್ 2017 (15:22 IST)
ಒಂದು ವೇಳೆ ನಾವೆಲ್ಲರು ಒಂದಾಗಿ ಹೋರಾಟ ಮಾಡಿದಲ್ಲಿ ಬಿಜೆಪಿ ದೇಶದಲ್ಲಿಯೇ ಕಾಣುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಪಕ್ಷಗಳಿಗೆ ಕರೆ ನೀಡಿದ್ದಾರೆ. 
ಬಂಡಾಯ ಜೆಡಿ (ಯು) ನಾಯಕ ಶರದ್ ಯಾದವ್ ಸಂಘಟಿಸಿದ ವಿರೋಧ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತೀವ್ರ ದಾಳಿ ನಡೆಸಿ ಹೋದಲೆಲ್ಲಾ ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ ಎಂದು ಗುಡುಗಿದ್ದಾರೆ.
 
ಸಾಂಗ್ಜೀ ವಿರಾಸತ್ ಬಚಾವೊ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಭಾಗವಹಿಸಿರುವ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸುಳ್ಳಿನ ಸರದಾರ ಎಂದು ಕಿಡಿಕಾರಿದರು.
 
ವಿರೋಧ ಪಕ್ಷದ ನಾಯಕರ ಪಕ್ಷಗಳ ಸಮಾವೇಶವನ್ನು "ಭಯಭೀತರ ಒಕ್ಕೂಟ" ಎಂದು ಬಿಜೆಪಿ ತಿರುಗೇಟು ನೀಡಿದೆ.
 
ಪ್ರಧಾನಿ ಮೋದಿಯವರಿಗೆ ಹೆದರಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವವರು ಮತ್ತು ಶಿಕ್ಷೆಯ ಭೀತಿ ಎದುರಿಸುತ್ತಿರುವ ವಿಪಕ್ಷಗಳು ಒಕ್ಕೂಟ ರಚಿಸಿವೆ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
 
ಪ್ರಧಾನಿ ಮೋದಿ ನೇತೃತ್ವದ ಸರಕಾರ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಮೋದಿ ಸ್ವಚ್ಚ ಭಾರತ ಸೃಷ್ಟಿಸಲು ಬಯಸಿದ್ದರು. ಆದರೆ, ಜನತೆ ಸತ್ಯ ಭಾರತವನ್ನು ಬಯಸುತ್ತಿದ್ದಾರೆ ಎಂದು ರಾಹುಲ್ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ