ಮುಡಾ ಪ್ರಕರಣ ಪ್ರಧಾನಿ ಅಂಗಳಕ್ಕೆ: ಸಿಬಿಐ ತನಿಖೆ ಕೋರಿ ಮೋದಿಗೆ 296 ಪುಟಗಳ ದಾಖಲೆ ಸಲ್ಲಿಕೆ

Sampriya

ಶನಿವಾರ, 7 ಡಿಸೆಂಬರ್ 2024 (14:18 IST)
ಮೈಸೂರು: ಮುಖ್ಯಮಂತ್ರಿ ಸಿದ್ದರಾಯಯ್ಯ ವಿರುದ್ಧದ ಮುಡಾ ಹಗರಣ ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾದಲ್ಲಿ ನಡೆದಿರುವ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ವಕೀಲರೊಬ್ಬರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜು.19ರಂದು ಪ್ರಧಾನ ಮಂತ್ರಿಗಳಿಗೆ ದಾಖಲೆ ಸಮೇತವಾಗಿ ವಕೀಲ ರವಿಕುಮಾರ್ ಎಂಬವರು ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ ತಲುಪಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ದಿನೇಶ್ ಮತ್ತು ಡಿ.ಬಿ.ನಟೇಶ್ ಅವರಿಬ್ಬರು ಸರ್ಕಾರಕ್ಕೆ 100 ಕೋಟಿಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ. ಅಲ್ಲದೇ ಸೇಲ್ ಡೀಡ್ ಮತ್ತು  ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಪತ್ರದಲ್ಲಿ ದಾಖಲಿಸಲಾಗಿದೆ.

ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಮುಡಾ ಹಗರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಮತ್ತೊಂದೆಡೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ