ಮಗಳ ಜತೆ 10 ನೇ ತರಗತಿ ಪಾಸ್ ಆದ ಅಮ್ಮ

ಬುಧವಾರ, 8 ಜೂನ್ 2016 (13:08 IST)
ಸಾವಿನವರೆಗೂ ನಾವು ವಿದ್ಯಾರ್ಥಿಗಳಾಗಿಯೇ ಇರುತ್ತೇವೆ ಎನ್ನುತ್ತಾರೆ ಹಿರಿಯರು. ಕಲಿಯಲು ವಯೋ ಭೇಧವಿಲ್ಲ. ಇದಕ್ಕೆ ಉದಾಹರಣೆ ಮುಂಬೈನ 43 ವರ್ಷದ ಮುಂಬೈ ನಿವಾಸಿ ಮಹಿಳೆ. ಆಕೆ ತನ್ನ ಮಗಳೊಂದಿಗೆ ಪರೀಕ್ಷೆಗೆ ಕುಳಿತು 10 ನೇ ತರಗತಿಯನ್ನು ಪಾಸ್ ಮಾಡಿದ್ದಾರೆ.

ಇಬ್ಬರು ಹೆಣ್ಣುಮಕ್ಕಳ ತಾಯಿಯಾದ ಸರಿತಾ ಜಗಾದೆ ಬಡತನದಿಂದಾಗಿ 4ನೇ ತರಗತಿಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಆದರೆ ವಿವಾಹದ ಬಳಿಕವೂ ಅವರಿಗೆ ಓದುವ ಆಕಾಂಕ್ಷೆ ತಗ್ಗಿರಲಿಲ್ಲ. ಈ ಬಾರಿ 10 ನೇ ತರಗತಿ ಓದುತ್ತಿದ್ದ ಅವರ ಮಗಳು ತನ್ನ ತಾಯಿ ಬಯಕೆಗೆ ನೀರೆರೆದಿದ್ದಾರೆ. ತಾಯಿ ಮಗಳು ಇಬ್ಬರು ಸೇರಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದಾರೆ. 
 
ಸೋಮವಾರ ಫಲಿತಾಂಶ ಪ್ರಕಟವಾಗಿದ್ದು ತಾಯಿ ಮತ್ತು ಮಗಳು  ಇಬ್ಬರು ತೇರ್ಗಡೆಯಾಗಿದ್ದಾರೆ. 34 ವರ್ಷಗಳ ನಂತರ ಶಿಕ್ಷಣವನ್ನು ಮುಂದುವರೆಸಿದ ಸರಿತಾ ಪ್ರಥಮ ಪ್ರಯತ್ನದಲ್ಲಿಯೇ ಯಶ ಕಂಡಿದ್ದು ವಿಶೇಷ.
 
ಪರೀಕ್ಷೆಯಲ್ಲಿ ಸರಿತಾಗೆ 44 ಪ್ರತಿಶತ ಅಂಕಗಳು ಬಂದರೆ ಆಕೆಯ ಮಗಳು ಶ್ರುತಿಕಾಗೆ 69 ಪ್ರತಿಶತ ಅಂಕಗಳು ಬಂದಿವೆ. 
 
ನಾನು ನಾಲ್ಕನೇ ತರಗತಿ ಓದುತ್ತಿದ್ದಾಗ ತಂದೆ ಸಾವನ್ನಪ್ಪಿದ್ದರು. ಬಡತನದಲ್ಲಿ ಬೇಯುತ್ತಿದ್ದ ಕುಟುಂಬ ನಿರ್ವಹಣೆಗೆ  ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ನಾವು ನಾಲ್ಕು ಸಹೋದರಿಯರು ಮತ್ತು ನಮಗೊಬ್ಬ ಸಹೋದರ. ನಾವೆಲ್ಲ ಸಹೋದರಿಯರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಹೋದೆವು. ಈಗ ನನ್ನ ಕನಸನ್ನು ಪೂರೈಸಿಕೊಂಡೆ ಎನ್ನುತ್ತಾರೆ ವಾಗೇಶ್ವರಿ ನಗರದ ನಿವಾಸಿ ಸರಿತಾ.  

ವೆಬ್ದುನಿಯಾವನ್ನು ಓದಿ