ಇಂಟರ್ನೆಟ್ ಟ್ರೈನಿಂಗ್ ಪಡೆದು ಹೆಂಡತಿಯನ್ನು ಮರ್ಡರ್ ಮಾಡ್ದ!
ಸೋಮವಾರ, 8 ಆಗಸ್ಟ್ 2022 (09:28 IST)
ಭೋಪಾಲ್ : ಪತ್ನಿ ಹೆಸರಿನಲ್ಲಿರುವ ವಿಮೆಯ ಹಣ ಕಬಳಿಸಲು ವ್ಯಕ್ತಿಯೋರ್ವ ಇಂಟರ್ನೆಟ್ನಲ್ಲಿರುವ ವೀಡಿಯೋಗಳನ್ನು ನೋಡಿ ಟ್ರೈನಿಂಗ್ ಪಡೆದು ಹೆಂಡತಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಪತಿಯನ್ನು ಬದ್ರಿಪ್ರಸಾದ್ ಮೀನಾ ಎಂದು ಗುರುತಿಸಲಾಗಿದ್ದು, ತಾನು ಮಾಡಿದ್ದ ಸಾಲವನ್ನು ತೀರಿಸಲು ಹೆಂಡತಿಯ ವಿಮೆಯ ಹಣವನ್ನು ಕ್ಲೈಮ್ ಮಾಡಲು ಆಕೆಯನ್ನೇ ಕೊಲೆ ಮಾಡಿದ್ದಾನೆ.
ಈ ಕೃತ್ಯವೆಸಗಲು ಆರೋಪಿ ಇಂಟರ್ನೆಟ್ನಿಂದ ಸಹಾಯ ಪಡೆದಿದ್ದಾನೆ. ತನ್ನ ಸಾಲವನ್ನು ತೀರಿಸುವುದು ಹೇಗೆಂದು ತಲೆಕೆಡಿಸಿಕೊಂಡಿದ್ದ ಆರೋಪಿ ಇಂಟರ್ನೆಟ್ನಲ್ಲಿ ಹಲವಾರು ವೀಡಿಯೋಗಳನ್ನು ವೀಕ್ಷಿಸಿದ್ದಾನೆ. ಕೆಲವು ವೀಡಿಯೋಗಳನ್ನು ನೋಡಿದ ಬಳಿಕ ತನ್ನ ಹೆಂಡತಿ ಹೆಸರಿಗೆ ವಿಮೆ ಮಾಡಿಸಿರುವುದು ನೆನಪಾಗಿ, ಹಣಕ್ಕಾಗಿ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದನು.
ಮೃತ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದ್ದು, ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ಭೋಪಾಲ್ ರಸ್ತೆಯ ಮನಾ ಜೋಡ್ ಬಳಿ ಪೂಜಾ ಗುಂಡಿನಿಂದ ಗಾಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಆರೋಪಿ ಪೊಲೀಸರ ದಾರಿತಪ್ಪಿಸಲು ಪ್ರಯತ್ನಿಸಿದನು. ಪತ್ನಿ ಮೃತಪಟ್ಟ ನಂತರ ಆಕೆಯನ್ನು ಕೊಲ್ಲಲಾಗಿದೆ ಎಂದು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದನು. ಆದರೆ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಕೊಲೆಯಾದ ಸಮಯದಲ್ಲಿ ಆ ನಾಲ್ವರು ಘಟನಾ ಸ್ಥಳದಲ್ಲಿಯೇ ಇರಲಿಲ್ಲ ಎಂದು ತಿಳಿದುಬಂದಿದ್ದು, ನಿಜವಾದ ಆರೋಪಿ ಮೃತ ಮಹಿಳೆಯ ಪತಿಯೇ ಎಂಬ ಸತ್ಯ ಬಹಿರಂಗಗೊಂಡಿದೆ.