ನೆಹರು, ಇಂದಿರಾ ಸೇನೆ ಕಟ್ಟಿದಾಗ ಮೋದಿಗೆ ಪ್ಯಾಂಟ್‌ ಹಾಕೋದು ಗೊತ್ತಿರಲಿಲ್ಲ: ಕಮಲ್ ನಾಥ್

ಸೋಮವಾರ, 15 ಏಪ್ರಿಲ್ 2019 (17:38 IST)
ಖಾಂಡ್ವಾ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಭಾರತೀಯ ಸೇನೆ ಕಟ್ಟುತ್ತಿರುವಾಗ ಪ್ರಧಾನಿ ಮೋದಿಗೆ ಪ್ಯಾಂಟ್ ಹಾಕಿಕೊಳ್ಳಲು ಬರುತ್ತಿರಲ್ಲ. ಇದೀಗ ರಾಷ್ಟ್ರದ ಭದ್ರತೆಯ ಬಗ್ಗೆ ಮಾತನಾಡ್ತಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಭ್ರಷ್ಟ ಎಂದು ಪ್ರಧಾನಮಂತ್ರಿ ಮೋದಿ ಟೀಕಿಸಿದ ಮಾರನೇ ದಿನವೇ ಕಮಲ್ ನಾಥ್ ಮೋದಿಗೆ ಟಾಂಗ್ ನೀಡಿದ್ದಾರೆ.
 
ಖಾಂಡ್ವಾ ಜಿಲ್ಲೆಯ ಹರ್ಸೂಡ್ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದಾಗ ಅತ್ಯಧಿಕ ಭಯೋತ್ಪಾದನೆ ದಾಳಿಗಳು ನಡೆದಿವೆ. ಮೋದಿ ದೇಶದ ಭದ್ರತೆಯ ಬಗ್ಗೆ ಮಾತನಾಡ್ತಾರೆ, ಐದು ವರ್ಷಗಳ ಹಿಂದೆ ದೇಶ ಸುರಕ್ಷಿತ ಕೈಗಳಲ್ಲಿರಲಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.
 
ಮೋದಿಯವರೇ ನೀವು ಪೈಜಾಮಾ ಮತ್ತು ಪ್ಯಾಂಟ್‌ ಹಾಕಿಕೊಳ್ಳಲು ಕಲಿತಿರಲಿಲ್ಲ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ದೇಶಕ್ಕೆ ಬಲಿಷ್ಠವಾದ ಭೂಸೇನೆ, ವಾಯುಸೇನೆ, ಮತ್ತು ನೌಕಾಸೇನೆಯನ್ನು ಸೃಷ್ಟಿಸಿದರು. ನಿಮ್ಮ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ ಎಂದು ಗುಡುಗಿದ್ದಾರೆ.
 
ಕೇಂದ್ರದಲ್ಲಿ ಯಾರ ಸರಕಾರವಿದ್ದಾಗ ಅತಿ ಹೆಚ್ಚು ಭಯೋತ್ಪಾದನೆ ದಾಳಿಗಳಾಗಿವೆ. ದೆಹಲಿಯಲ್ಲಿ ಸಂಸತ್ತಿನ ಮೇಲೆ 2001 ರಲ್ಲಿ ದಾಳಿ ನಡೆದಾಗ ಕೇಂದ್ರದಲ್ಲಿ ಯಾರ ಸರಕಾರವಿತ್ತು? ಬಿಜೆಪಿ ಸರಕಾರವಿತ್ತು. ಅಂಕಿ ಅಂಶಗಳ ಆಧಾರದ ಮೇಲೆ ಹೇಳುವುದಾದಲ್ಲಿ ಬಿಜೆಪಿ ಅಡಳಿತವಿರುವಾಗ ಹೆಚ್ಚು ಭಯೋತ್ಪಾದನೆ ದಾಳಿಗಳಾಗಿವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ