ನವದೆಹಲಿ : 2024ರ ಲೋಕಸಭೆ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆ ಹಲವು ರಾಜಕೀಯ ಪಕ್ಷಗಳು ತಂತ್ರಗಾರಿಕೆ ಆರಂಭಿಸಿದ್ದು, ಇದರ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೊಸ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಅಕ್ಟೋಬರ್ 5 ರಂದು ಸಂಜೆ ಏಳು ಗಂಟೆಗೆ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದು, ಡಿಸೆಂಬರ್ 9 ರಂದು ದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ರಾಷ್ಟ್ರೀಯ ಅಜೆಂಡಾವನ್ನು ಚಂದ್ರಶೇಖರ್ ರಾವ್ ಜನರಿಗೆ ತಿಳಿಸಲಿದ್ದಾರೆ.
ಮೂಲಗಳ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿ ಅನ್ನು ಭಾರತೀಯ ರಾಷ್ಟ್ರ ಸಮಿತಿ ಆಗಿ ಮರು ನಾಮಕರಣ ಮಾಡಲು ಚಂದ್ರಶೇಖರ್ ರಾವ್ ಪಕ್ಷದ ಇತರೆ ನಾಯಕರಿಂದ ಅನುಮತಿ ಪಡೆದುಕೊಂಡಿದ್ದಾರೆ. ಪಕ್ಷದ ಹೆಸರು ಮಾತ್ರ ಬದಲಾಗಲಿದ್ದು, ಚಿಹ್ನೆ ಹಾಗೂ ಧ್ವಜ ಮುಂದುವರಿಯಲಿದೆ.