ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

ಶನಿವಾರ, 16 ಜುಲೈ 2016 (15:53 IST)
ಕಿಂಗ್‌ಫಿಶರ್‌ ಏರ್‌ಲೈನ್ಸ್ ಮುಖ್ಯಸ್ಥ ವಿಜಯ ಮಲ್ಯಗೆ ಸಂಕಷ್ಟಗಳಿಂದ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ. ಇದೀಗ ಅಂಧೇರಿಯ ಮೆಟ್ರೋಪಾಲಿಟನ್ ಕೋರ್ಟ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. 
 
ಉದ್ಯಮಿ ವಿಜಯ್ ಮಲ್ಯ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ನೀಡಿದ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.
 
ಕಳೆದ ಮೇ 7 ರಂದು ನ್ಯಾಯಮೂರ್ತಿ ಎ.ಎ.ಲೌಲ್‌ಕರ್, ಮಲ್ಯ ಜುಲೈ 16 ರಂದು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗುವುದು ಎಂದು ನಿರ್ದೇಶನ ನೀಡಿದ್ದರು.
 
ಆದರೆ, ಇಂದು ವಿಜಯ್ ಮಲ್ಯ ನ್ಯಾಯಾಲಯಕ್ಕೆ ಹಾಜರಾಗದಿರುವುದರಿಂದ ಕೋರ್ಟ್ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿದೆ.
 
100 ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಿಂಗ್‌ಫಿಶರ್ ಮತ್ತು ಎಎಐ ದಾಖಲಿಸಿದ ದೂರಿನ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು.
 
ಬ್ಯಾಂಕ್‌ಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಹಿಂಬಾಕಿ ಉಳಿಸಿಕೊಂಡಿರುವ ಮಲ್ಯ, ನ್ಯಾಯಾಲಯಕ್ಕೆ ಗೈರುಹಾಜರಾಗುವುದನ್ನು ರದ್ದುಗೊಳಿಸುವಂತೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೋರ್ಟ್‌ಗೆ ಮನವಿ ಮಾಡಿದೆ.
 
ಇದಕ್ಕಿಂತ ಮೊದಲು, ಎಎಐ ಪರ ವಾದ ಮಾಡಿದ ವಕೀಲರು, ಮಲ್ಯ ಅವರ ಪಾಸ್‌ಪೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದರೂ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ