ಬುಲೆಟ್ ರೈಲುಗಳಲ್ಲಿ ಮೋದಿಯ ಸೂಟ್-ಬೂಟ್ ಗೆಳೆಯರು ಮಾತ್ರ ಪ್ರಯಾಣಿಸಲು ಸಾಧ್ಯ: ರಾಹುಲ್ ಗಾಂಧಿ

ಶುಕ್ರವಾರ, 29 ಜುಲೈ 2016 (20:22 IST)
ಮುಂಗಾರು ಅಧಿವೇಶನದಲ್ಲಿ ಅಗತ್ಯ ವಸ್ತುಗಳ ದರ ಏರಿಕೆ ಕುರಿತಂತೆ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಬುಲೆಟ್ ರೈಲುಗಳಲ್ಲಿ ಮೋದಿಯವರ ಸೂಟ್-ಬೂಟ್ ಗೆಳೆಯರು ಮಾತ್ರ ಪ್ರಯಾಣಿಸಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು. 
 
ಮೋದಿ ಬುಲೆಟ್ ರೈಲುಗಳನ್ನು ತರುವುದಾಗಿ ಘೋಷಿಸಿದ್ದಾರೆ. ಬುಲೆಟ್ ರೈಲು ಟಿಕೆಟ್ ದರ 15 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಲು ಸಾಧ್ಯವಿಲ್ಲ. ಮೋದಿಯವರ ಸೂಟ್-ಬೂಟ್ ಗೆಳೆಯರು ಮಾತ್ರ ಅಂತಹ ರೈಲಿನಲ್ಲಿ ಸಂಚರಿಸಲು ಸಾಧ್ಯ. ಜನಸಾಮಾನ್ಯರಂತು ಅಂತಹ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದರು.
 
ಕೇಂದ್ರದಲ್ಲಿರುವ ಮೋದಿ ಸರಕಾರ ಆರಂಭದಲ್ಲಿ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಬುಲೆಟ್ ರೈಲು ಸಂಚಾರಕ್ಕೆ ಯೋಜನೆ ರೂಪಿಸಿದೆ. ಆದರೆ, ಈಗಾಗಲೇ ರೈಲ್ವೆ ಇಲಾಖೆಯ ತಜ್ಞರು ಅದೊಂದು ದುಬಾರಿ ವೆಚ್ಚದ ಯೋಜನೆ ಎಂದು ಟೀಕಿಸಿದ್ದಾರೆ ಎಂದು ಕಿಡಿಕಾರಿದರು.
 
ದೇಶದ ಕಟ್ಟಕಡೆಯ ಬಡವನನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕು ಎನ್ನುವುದೇ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ. ಮೋದಿ ಶ್ರೀಮಂತರಿಂದ ಕಾರ್ಯಾರಂಭ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಅತಿ ಬಡವನಿಂದ ಕಾರ್ಯಾರಂಭ ಮಾಡುತ್ತದೆ ಎಂದು ತಿರುಗೇಟು ನೀಡಿದರು.
 
ಕಳೆದ 27 ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶ ತೀರಾ ಹಿಂದುಳಿದಿದೆ. ಎರಡವರೆ ದಶಕಗಳವರೆಗೆ ಆಳಿದ ಪಕ್ಷಗಳು ರಾಜ್ಯವನ್ನು ಛಿದ್ರಗೊಳಿಸಿವೆ. ಉತ್ತರಪ್ರದೇಶವನ್ನು ದೇಶದಲ್ಲಿಯೇ ನಂಬರ್ ಒನ್ ರಾಜ್ಯವಾಗಿಸಬೇಕು ಎನ್ನುವುದೇ ನಮ್ಮ ಕನಸಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ