ನವದೆಹಲಿ: ಲೋಕಸಭೆ ಚುನಾವಣೆ ಕಣದಲ್ಲಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ತಮ್ಮ ಪಕ್ಷದ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಮೋದಿ ಮತ್ತು ರಾಹುಲ್ ನೇರವಾಗಿ ವಾಗ್ಯುದ್ಧ ಆರಂಭಿಸಿದ್ದಾರೆ. ಇಂದು ಮತ್ತೊಮ್ಮೆ ಒಂದೇ ದಿನ ಇಬ್ಬರೂ ಘಟಾನುಘಟಿ ನಾಯಕರು ಪ್ರಚಾರ ಕಣದಲ್ಲಿ ರಂಗೇರಿಸಲಿದ್ದಾರೆ. ಪ್ರಧಾನಿ ಮೋದಿಗೆ ಇದು ದೆಹಲಿಯಲ್ಲಿ ಮೊದಲ ಚುನಾವಣಾ ಸಮಾವೇಶವಾಗಿರಲಿದೆ.
ಪ್ರಧಾನಿ ಮೋದಿ ಪೂರ್ವ ದೆಹಲಿಯಲ್ಲಿ ಇಂದು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ ಸಮವೇಶ ನಡೆಯಲಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಿಸಲು ಬಿಜೆಪಿ ತಯಾರಿ ನಡೆಸಿದೆ. ಇದಕ್ಕಾಗಿ ನಿನ್ನೆಯೇ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಇಂದು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಇನ್ನೊಂದೆಡೆ ರಾಹುಲ್ ಗಾಂಧಿ ಕೂಡಾ ಇಂದು ಸಂಜೆ ಚಾಂದಿನಿ ಚೌಕ್ ನಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿಗೂ ಇದು ದೆಹಲಿಯಲ್ಲಿ ಮೊದಲ ಚುನಾವಣಾ ಸಮಾವೇಶವಾಗಿರಲಿದೆ. ದೆಹಲಿಯ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಮೇ 25 ರಂದು ಮತದಾನ ನಡೆಯಲಿದೆ.