'ಕೈ' ಮುಳುಗುತ್ತಿರುವ ಹಡಗು: ಮೋದಿ

ಶುಕ್ರವಾರ, 27 ಜನವರಿ 2017 (16:47 IST)
ಪಂಜಾಬ್‌ನಲ್ಲಿ ಚುನಾವಣಾ ಕಣ ರಂಗೇರಿದ್ದು ಇಂದು ಪ್ರಧಾನಿ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಮತ್ತು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಬಿರುಸಿನ ಪ್ರಚಾರವನ್ನು ನಡೆಸಿದ್ದಾರೆ. 

 
ಜಲಂಧರ್‌ನಲ್ಲಿ ಕೈ, ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಸೇರಿರುವ ನವಜೋತ್ ಸಿಂಗ್ ಸಿಧು ವಿರುದ್ಧ ಹರಿಹಾಯ್ದ ಮೋದಿ, ಪಂಜಾಬ್‌ನಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು ಮುಳುಗುವ ಹಡಗಂತಾಗಿದೆ. ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ 'ಕೈ' ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ ಎಂದು ಟೀಕಿಸಿದ್ದಾರೆ.
 
ಕೆಲ ರಾಜಕಾರಣಿಗಳು ರಾಜ್ಯದ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ. 
 
ತಮ್ಮ ಮಿತ್ರ ಪಕ್ಷ ಅಕಾಲಿ ದಳದ ನಾಯಕ ಮತ್ತು ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಅವರನ್ನು ಹಾಡಿಹೊಗಳಿದ ಅವರು, ಬಾದಲ್ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ಮತ್ತೆ ಅಧಿಕಾರದ ಗದ್ದುಗೆಯನ್ನೇರಲಿದ್ದಾರೆ ಎಂದು ಹೇಳಿದ್ದಾರೆ. 
 
ಕೆಲವರು ರಾಜಕೀಯ ಲಾಭಕ್ಕಾಗಿ ಪಂಜಾಬ್‌ನ ಹೆಸರನ್ನು ಕೆಡಿಸುತ್ತಿದ್ದಾರೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
 
ಇಂದು ಬೆಳಿಗ್ಗೆ ರಾಹುಲ್‌ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಮೋದಿ, ‘ರಾಜಕೀಯ ಲಾಭಕ್ಕಾಗಿ ಪಂಜಾಬ್‌ಗೆ ಕೆಟ್ಟ ಹೆಸರು ತರುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದ್ದಾರೆ.
 
ಮಜಿಥಾದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ನಾಲ್ಕು ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ಶೇಕಡ 70ರಷ್ಟು ಯುವಜನರು ಮಾದಕ ವ್ಯಸನಿಗಳಾಗಿದ್ದರು’ ಎಂದು ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ