ತ್ರಿವಳಿ ತಲಾಖ್ ಪರ ವಕಾಲತ್ತು ನಡೆಸುವವರ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸೋಮವಾರ, 24 ಅಕ್ಟೋಬರ್ 2016 (16:02 IST)
ತ್ರಿವಳಿ ತಲಾಖ್ ಪರವಾಗಿ ಹೇಳಿಕೆ ನೀಡುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರು ಸಂಕಷ್ಟಕ್ಕೆ ಸಿಲುಕುವುದನ್ನು ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
 
ಉತ್ತರಪ್ರದೇಶದ ಮಾಹೋಬಾ ಜಿಲ್ಲೆಯಲ್ಲಿ ಆಯೋಜಿಸಲಾದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿ ಫೋನ್ ಮುಖಾಂತರ ತ್ರಿವಳಿ ತಲಾಖ್ ನೀಡಿ, ಮಹಿಳೆಯನ್ನು ಸಂಕಷ್ಟಕ್ಕೆ ದೂಡುವುದು ಸರಿಯೇ ಎಂದು ಪ್ರಶ್ನಿಸಿದರು. 
 
ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ವಿಷಯವಾಗಿಸುವುದು ದಯವಿಟ್ಟು ಮಾಡಬೇಡಿ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕುಗಳನ್ನು ಕೊಡಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
 
ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕೆಲ ಪಕ್ಷಗಳು ಮುಸ್ಲಿಂ ಮಹಿಳೆಯರಿಗೆ ನೈಸರ್ಗಿಕವಾಗಿ ದೊರೆಯಬೇಕಾದ ಹಕ್ಕಿನಿಂದ ದೂರ ಮಾಡುತ್ತಿವೆ ಎಂದು ಆರೋಪಿಸಿದರು.
 
ಮಹಿಳೆಯರ ನೀತಿಗಳಲ್ಲಿ ಸುಧಾರಣೆಯಾಗಬೇಕು ಎಂದು ಬಯಸುವವರು ಮತ್ತು ಸುಧಾರಣೆ ಸರಿಯಲ್ಲ ಎನ್ನುವವರ ಮಧ್ಯೆ ಚರ್ಚೆ ನಡೆಯಬೇಕು. ಮುಸ್ಲಿಂ ಮಹಿಳೆಯರಿಗೆ ಸಂವಿಧಾನದಡಿಯಲ್ಲಿ ನ್ಯಾಯ ಕೊಡಿಸುವುದು ಕೇಂದ್ರ ಸರಕಾರದ ಮತ್ತು ದೇಶದ ಜನತೆಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
 
ಮುಂಬರುವ 10 ವರ್ಷಗಳಲ್ಲಿ ಉತ್ತರಪ್ರದೇಶ ಉತ್ತಮ ಪ್ರದೇಶವಾಗಬೇಕು ಎಂದು ಬಯಸಿದಲ್ಲಿ ಎಸ್‌ಪಿ-ಬಿಎಸ್‌ಪಿ ಪಕ್ಷಗಳ ಸೈಕಲ್‌ನ್ನು ಮುರಿದು ಹಾಕಿ ಎಂದು ಜನತೆಗೆ ಕರೆ ನೀಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ