ಪ್ರಧಾನಿ ಮೋದಿಯಿಂದ ದೇಶದ ಆರ್ಥಿಕತೆ ವಿನಾಶದತ್ತ: ಕಾಂಗ್ರೆಸ್

ಮಂಗಳವಾರ, 3 ಜನವರಿ 2017 (15:38 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧದಿಂದಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ವಿನಾಶದತ್ತ ತಳ್ಳಿದಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
 
ನೋಟು ನಿಷೇಧ ವಿರುದ್ಧದ ಪ್ರಚಾರಕ್ಕಾಗಿ ಎಐಸಿಸಿಯಿಂದ ನೇಮಕಗೊಂಡ ಬಿಸ್ವರಂಜನ್ ಮೊಹಾಂಟಿ ಮಾತನಾಡಿ, ಪ್ರಧಾನಮಂತ್ರಿ ಮೋದಿಯ ನೋಟು ನಿಷೇಧ ನಿರ್ಧಾರ ಮಾನವ ನಿರ್ಮಿತ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಕೇಂದ್ರ ಸರಕಾರದ ನೋಟು ನಿರ್ಧಾರ ನಿಷೇಧದಿಂದಾಗಿ ದೇಶದ ಐದು ಕೋಟಿ ಜನತೆ ನಿರುದ್ಯೋಗಿಗಳಾಗಿದ್ದಾರೆ. ಬಡ ಕುಟುಂಬಗಳು, ರೈತರು, ಸಣ್ಣ ವರ್ತಕರು ಬೀದಿಗೆ ಬಂದಿದ್ದಾರೆ. ಮೋದಿಯವರ 50 ದಿನಗಳ ಗಡುವು ಮುಕ್ತಾಯಗೊಂಡಿದ್ದರೂ ಜನತೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿ. ಬ್ಯಾಂಕ್‌ಗಳಲ್ಲಿ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಜಮಾ ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸಬೇಕು. ನೋಟು ನಿಷೇಧದಿಂದ ಎಷ್ಟು ಕಪ್ಪು ಹಣ ವಶಪಡಿಸಿಕೊಳ್ಳಲಾಗಿದೆ ಎನ್ನುವ ಬಗ್ಗೆ ಪ್ರಧಾನಿ ಮೋದಿ ಸಂಪೂರ್ಣ ವಿವರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿಸ್ವರಂಜನ್ ಮೊಹಾಂಟಿ ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ