ಬಂಧಿಸಿಕೊಂಡು ಬನ್ನಿ ಎಂದರೆ ಡಕಾಯಿತಿ: ಕಳ್ಳ 'ಪೊಲೀಸ್' ಅಮಾನತು

ಶುಕ್ರವಾರ, 14 ಅಕ್ಟೋಬರ್ 2016 (12:42 IST)
ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಆರೋಪಿಯನ್ನು ಬಂಧಿಸಿ ಕರೆ ತನ್ನಿ ಎಂದು ಕಳುಹಿಸಿದರೆ ಆತನ ಮನೆಯಲ್ಲಿ ದರೋಡೆ ಮಾಡಿ ಪೊಲೀಸ್ ಇಲಾಖೆಗೆ ಇರಿಸುಮುರಿಸು ತಂದಿದ್ದ ಕೆಜಿಎಫ್ ಬಳಿಯ ರಾಬರ್ಟ್ ಸನ್ ಪೊಲೀಸ್ ಠಾಣೆ ಮುಖ್ಯ ಪೇದೆ ಗೋಪಾಲ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. 
ಸಿಂಗ್ ಅವರನ್ನು ಅಮಾನತುಗೊಳಿಸಿ ಎಸ್‌ಪಿ ದಿವ್ಯಾ ಗೋಪಿನಾಥ್ ಆದೇಶಿಸಿದ್ದಾರೆ. 
 
ಅಕ್ಟೋಬರ್ 8 ರಂದು ದಾಖಲಾಗಿದ್ದ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಅಜಯ್ ಕುಮಾರ್ ಎಂಬುವವನ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಆತ ಗೋವಾದಲ್ಲಿದ್ದಾನೆ ಎಂಬ ಮಾಹಿತಿಯ ಮೇರೆಗೆ ಈ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಬೇಕಿತ್ತು. ಅದಕ್ಕೂ ಮೊದಲು ಅಜಯ್ ಚಲನವಲನ ತಿಳಿದುಕೊಳ್ಳಲು ಸಿಂಗ್ ಅವರನ್ನು ಗೋವಾಕ್ಕೆ ಕಳುಹಿಸಲಾಗಿತ್ತು. ತನ್ನ ಸ್ನೇಹಿತನೊಂದಿಗೆ ಅಲ್ಲಿಗೆ ತಲುಪಿದ ಗೋಪಾಲ್ ಸಿಂಗ್ ಆರೋಪಿಯ ಮೇಲೆ ನಿಗಾ ಇಡುವುದರ ಜತೆಗೆ ಆತನ ಮನೆಯನ್ನೇ ದರೋಡೆ ಮಾಡುವ ತಂತ್ರ ರೂಪಿಸಿದ್ದಾರೆ. ಅಂತೆಯೇ ತನಿಖಾ ತಂಡ ತಲುಪುವ ಒಂದು ಗಂಟೆ ಮೊದಲು ಆರೋಪಿ ಅಜಯ್ ಮನೆಯಲ್ಲಿ 12 ಲಕ್ಷ ಹಣ, ಚಿನ್ನಾಭರಣವನ್ನು ದೋಚಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ಅಲ್ಲಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ. ಬಳಿಕ ತಮಗೇನು ಗೊತ್ತಿಲ್ಲ ಎನ್ನುವಂತೆ ತನಿಖಾ ತಂಡವನ್ನು ಸೇರಿಕೊಂಡಿದ್ದಾರೆ. 
 
ದರೋಡೆಯಲ್ಲಿ ತನಗೆ ಸಾಥ್ ನೀಡಿದ್ದ ಸಾದಿಕ್ ಜತೆಗೆ ಇತ್ತೀಚಿಗೆ ಗೋಪಾಲ್ ಸಿಂಗ್‌ಗೆ ಹಣದ ವಿಚಾರಕ್ಕೆ ಕಿರಿಕ್ ಮಾಡಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೀಗ ಸಿಂಗ್‌ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ