ಪ್ರಧಾನಿ ಮೋದಿ ಸರ್ಕಾರದಲ್ಲಿ ಬಡವರು ಬಡವರಾಗಿಯೇ ಇದ್ದಾರೆ: ರಾಹುಲ್ ಗಾಂಧಿ

ಗುರುವಾರ, 21 ಡಿಸೆಂಬರ್ 2023 (12:47 IST)
ಪ್ರಧಾನಿ ಮೋದಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಒಂದು ವೇಳೆ, ಉದ್ಯೋಗ ಸೃಷ್ಟಿಸಿದ್ದರೆ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿತ್ತು. ಒಂದು ವೇಳೆ, ಆರ್ಥಿಕ ಅಭಿವೃದ್ಧಿ ಬಯಸಿದ್ದಲ್ಲಿ ಬಡವರಿಗೆ ಲಾಭವನ್ನು ವರ್ಗಾಯಿಸಬಹುದಿತ್ತು. ಕೇವಲ ದೊಡ್ಡ ಉದ್ಯಮಿಗಳಿಗೆ ಗುತ್ತಿಗೆ ನೀಡಿದ್ದರಿಂದ ಅವರು ಲಾಭ ಪಡೆಯುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಸೂಟ್ ಬೂಟ್ ಸರಕಾರಕ್ಕಿಂತ ಕೆಟ್ಟದಾಗಿದೆ. ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. 
 
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ಮೋದಿ, ತಾವೇ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಎನ್‌ಡಿಎ ಸರಕಾರ ಶಿಕ್ಷಣ, ಹೆಲ್ತ್‌ಕೇರ್ ಕ್ಷೇತ್ರದ ವೆಚ್ಚವನ್ನು ಕಡಿತಗೊಳಿಸುತ್ತಿದೆ. ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ರಾಜಸ್ಥಾನದಲ್ಲಿ ವಸುಂಧರಾ ರಾಜೇ ಮತ್ತು ಅವರ ಪುತ್ರ ಲಲಿತ್ ಮೋದಿಗೆ ಹಣ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ತುಂಬಿ ತುಳುಕುತ್ತಿದೆ. ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಬಿಜೆಪಿ ಸಿದ್ದವಾಗಿಲ್ಲ ಎಂದು ಗುಡುಗಿದರು. 
 
ಬಿಹಾರ್‌ನಲ್ಲಿ ನಿತೀಶ್ ಕುಮಾರ್ ಅವರೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ನಿತೀಶ್ ಪಾರದರ್ಶಕ ಅಡಳಿತವನ್ನು ಜಾರಿಗೆ ತಂದಿದ್ದಾರೆ ಎಂದು ರಾಹುಲ್ ಗಾಂಧಿ ಸಂತಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ