ಹುಬ್ಬಳ್ಳಿ: ಇಂದು ಪ್ರಧಾನಿ ಮೋದಿ 75 ನೇ ಹುಟ್ಟುಹಬ್ಬ. ನೆಚ್ಚಿನ ಪ್ರಧಾನಿಯ ಹುಟ್ಟುಹಬ್ಬದ ನಿಮಿತ್ತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ್ದಾರೆ.
ಪ್ರಧಾನಿ ಮೋದಿ ಜನ್ಮದಿನ ನಿಮಿತ್ತ ಬಿಜೆಪಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಸ್ವಚ್ಛತಾ ಅಭಿಯಾನವೂ ಒಂದು. ದೇಶದಲ್ಲಿ ಸ್ವಚ್ಛತೆಯ ಮಹತ್ವವನ್ನು ಸಾರಿ, ದೇಶದೆಲ್ಲೆಡೆ 'ಸ್ವಚ್ಛ ಭಾರತ್' ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಇಂದು ಹುಬ್ಬಳ್ಳಿಯ ಶ್ರೀ ಸಿದ್ದಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದದಲ್ಲಿ ನೈಋತ್ಯ ರೈಲ್ವೆ ವಲಯದವರು (SWR) ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಹೀ ಸೇವಾ ಅಂಗವಾಗಿ ನಡೆಯುತ್ತಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಲ್ಹಾದ್ ಜೋಶಿ ಭಾಗಿಯಾಗಿದ್ದಾರೆ.
ಈ ವೇಳೆ ಪೊರಕೆ ಹಿಡಿದು ರಸ್ತೆಯಲ್ಲಿ ಕಸ ಶುಚಿಗೊಳಿಸಿದ ಅವರು, ಸ್ವಚ್ಛತೆಯ ಮಹತ್ವವನ್ನು ನೆರೆದಿದ್ದವರ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ, ಬಿಜೆಪಿಯ ಪದಾಧಿಕಾರಿಗಳು, ಪಾಲಿಕೆಯ ಸದಸ್ಯರು, ಕಾರ್ಯಕರ್ತರು ಹಾಗೂ ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್, ಡಿಆರ್ಎಂ, ರೈಲ್ವೆ ಹಿರಿಯ ಅಧಿಕಾರಿಗಳು, ಸೇರಿದಂತೆ ಸ್ಥಳೀಯರು, ಗಣ್ಯರು,ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.