ಕೃಷಿ ಭೂಮಿ ಖರೀದಿ ಪ್ರಕರಣ: ಪ್ರಿಯಾಂಕ ವಾದ್ರಾಗೆ ಇ.ಡಿ. ಸಂಕಷ್ಟ
ಶುಕ್ರವಾರ, 29 ಡಿಸೆಂಬರ್ 2023 (12:09 IST)
ನವದೆಹಲಿ: ಹರ್ಯಾಣದಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಹೆಸರನ್ನು ಜಾರಿ ನಿರ್ದೇಶನಾಲಯ ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಪ್ರಿಯಾಂಕ ಹೆಸರು ಇ.ಡಿ. ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಆರೋಪ ಪಟ್ಟಿಯಲ್ಲಿ ಪ್ರಿಯಾಂಕ ಹೆಸರು ಉಲ್ಲೇಖ ಮಾಡಲಾಗಿದೆಯಷ್ಟೇ ಹೊರತು ಆರೋಪಿ ಎಂದು ಹೆಸರಿಸಲಾಗಿಲ್ಲ.
ಪ್ರಿಯಾಂಕ ಹರ್ಯಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಎಚ್. ಎಲ್. ಪಹ್ವಾ ಎಂಬಾತನಿಂದ ಐದು ಎಕರೆ ಕೃಷಿ ಭೂಮಿ ಖರೀದಿ ಮಾಡಿದ್ದರು. 2006 ರಲ್ಲಿ ಈ ಖರೀದಿ ವ್ಯವಹಾರ ನಡೆದಿತ್ತು. ಬಳಿಕ 2010 ರಲ್ಲಿ ಅದೇ ವ್ಯಕ್ತಿಗೆ ಪ್ರಿಯಾಂಕ ಭೂಮಿ ಮರು ಮಾರಾಟ ಮಾಡಿದ್ದಾರೆ. ಈ ವ್ಯವಹಾರದಲ್ಲಿ ಪ್ರಿಯಾಂಕ ಪತಿ ರಾಬರ್ಟ್ ವಾದ್ರಾ, ಪಹ್ವಾಗೆ ಪೂರ್ಣ ಹಣ ನೀಡಿಲ್ಲ.
ಇದಕ್ಕೆ ಮೊದಲು ಅಂದರೆ 2005 ರಲ್ಲಿ ರಾಬರ್ಟ್ ವಾದ್ರಾ ಕೂಡಾ ಪಹ್ವಾ ಜೊತೆಗೆ ಜಮೀನು ಖರೀದಿ ಮಾಡಿ ಬಳಿಕ ಅವರಿಗೇ ಮರು ಮಾರಾಟ ಮಾಡಿದ್ದರು. ಈ ಬಗ್ಗೆ ನವಂಬರ್ ನಲ್ಲಿ ನವದೆಹಲಿಯ ವಿಶೇಷ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದ್ದು, ಪ್ರಿಯಾಂಕ ಹೆಸರನ್ನೂ ಉಲ್ಲೇಖಿಸಲಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದು ಬಿಜೆಪಿಯ ಕುತಂತ್ರ ಎಂದಿದೆ. ಕಾಂಗ್ರೆಸ್ ನವರನ್ನು ಕಂಡರೆ ಬಿಜೆಪಿಯವರಿಗೆ ಭಯ. ಇದಕ್ಕೇ ಇಡಿ ಕೇಸ್ ನಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.