ನಂಬಿದ್ರೆ ನಂಬಿ ಬಿಟ್ಟರೆ ಬಿಡಿ: ಈ ಗ್ರಾಮದಲ್ಲಿ ವೇಶ್ಯಾವಾಟಿಕೆ ಕಡ್ಡಾಯ

ಸೋಮವಾರ, 4 ಡಿಸೆಂಬರ್ 2023 (12:50 IST)
ನವದೆಹಲಿಯಿಂದ ಕೇವಲ 200 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಭರತ್‌ಪುರ್ ಜಿಲ್ಲೆಯ ಖಾಕ್ರನಾಗ್ಲಾ ಗ್ರಾಮದಲ್ಲಿ ಬೇಡಿಯಾ ಸಮುದಾಯ ವಾಸವಾಗಿದೆ. ಗ್ರಾಮದಲ್ಲಿ ಆಸ್ಪತ್ರೆಗಳಿಲ್ಲ. ವಿದ್ಯುತ್ ಸಂಪರ್ಕವಂತೂ ಇಲ್ಲವೇ ಇಲ್ಲ. ಶಿಥಿಲಾವಸ್ಥೆಯಲ್ಲಿರುವ ಹರಕು ಮನೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಾಗಿದೆ. ಈ ಗ್ರಾಮದಲ್ಲಿ ವೇಶ್ಯಾವಾಟಿಕೆ ಪ್ರತಿಯೊಂದು ಮನೆಯ ಸಂಪ್ರದಾಯವಾಗಿದೆ.
 
ದೇಶದಲ್ಲಿ ಹೆಣ್ಣು ಮಗುವೆಂದರೆ ಕುಟುಂಬಕ್ಕೆ ಭಾರ ಎನ್ನುವಂತೆ ಪರಿಗಣಿಸಿ ಕೆಲವು ಬಾರಿ ಭ್ರೂಣ ಹತ್ಯೆ ಮಾಡಲಾಗುತ್ತದೆ. ಆದರೆ, ರಾಜಸ್ಥಾನದ ಬೇಡಿಯಾ ಬುಡಕಟ್ಟು ಸಮುದಾಯ ಕುಟುಂಬದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.
 
ರಾಜಸ್ಥಾನದ ಬೇಡಿಯಾ ಬುಡಕಟ್ಟು ಸಂಪ್ರದಾಯದಲ್ಲಿ ಹೆಣ್ಣಿನ ಬಗೆಗಿನ ಅಭಿಪ್ರಾಯ ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿದೆ. ಹೆಣ್ಣು ಮಗು ಹರೆಯಕ್ಕೆ ಬಂದಾಗ ವೇಶ್ಯಾವಾಟಿಕೆಗೆ ತಳ್ಳುವಂತಹ ಸಂಪ್ರದಾಯ ನೂರಾರು ವರ್ಷಗಳಿಂದ ಬೆನ್ನಟ್ಟಿ ಬಂದಿದೆ.
 
ಗ್ರಾಮದಲ್ಲಿ ಅಂದಾಜು 59 ಕುಟುಂಬಗಳಿವೆ. ಮನೆಯಲ್ಲಿರುವ ಯುವತಿಯರು ವೇಶ್ಯಾವಾಟಿಕೆ ನಡೆಸುವುದು ಕಡ್ಡಾಯವಾಗಿದೆ. ಹಿಂದೆ ಜಮೀನುದಾರಿ ವ್ಯವಸ್ಥೆ ಜಾರಿಯಲ್ಲಿರುವ ಸಂದರ್ಭದಲ್ಲಿ ಬೇಡಿಯಾ ಕುಟುಂಬದ ಯುವತಿಯರು ನೃತ್ಯಗಾರ್ತಿಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಜಮೀನುದಾರರ ಸಂತೋಷಕ್ಕಾಗಿ ಅವರ ಮುಂದೆ ಯುವತಿಯರು ನೃತ್ಯ ಮಾಡುತ್ತಿದ್ದರು.
 
ಜಮೀನುದಾರಿ ವ್ಯವಸ್ಥೆ ಹೋದ ನಂತರ ಆದಾಯವಿಲ್ಲದೇ ತತ್ತರಿಸಿದ ಬೇಡಿಯಾ ಕುಟುಂಬಗಳು ಹೊಟ್ಟೆಪಾಡಿಗಾಗಿ ವೇಶ್ಯಾವಾಟಿಕೆಗೆ ಮೊರೆಹೋಗಿವೆ.
 
ಮನೆಯಲ್ಲಿರುವ 13 ರಿಂದ 15 ವರ್ಷ ವಯಸ್ಸಿನ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಅರ್ಹರಾಗಿರುತ್ತಾರೆ. ಹಣದಾಸೆಗಾಗಿ ಅದಕ್ಕಿಂತ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಕೂಡಾ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ಎನ್ನುವ ಆರೋಪಗಳಿವೆ.
 
ಬಾಲಕಿಯರು 13 ವರ್ಷದವರಾದ ನಂತರ ಕುಟುಂಬದ ಸದಸ್ಯರು 'ನಾಥ್ ಉತ್ರೈ' ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಅಧಿಕೃತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಾರೆ. ಅಂದು ಬಾಲಕಿಯನ್ನು ಮದುವಣಗಿತ್ತಿಯಾಗಿ ಸಿಂಗರಿಸಿ ಅತಿ ಹೆಚ್ಚು ಹಣ ನೀಡಲು ಸಿದ್ದವಾದ ವಿಟಪುರುಷನನ್ನು ಮದುಮಗನಾಗಿ ಸಿಂಗರಿಸಿ ಮೊದಲ ರಾತ್ರಿ ನಡೆಸಲಾಗುತ್ತದೆ. ನಂತರ ಅವಳು ವೇಶ್ಯಾವಾಟಿಕೆಯನ್ನು ಮುಂದುವರಿಸುತ್ತಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ