ಇಳಿಯಿತು ಪ್ರೇಮದ ಅಮಲು: ಅತ್ತೆಯನ್ನೇ ಮದುವೆಯಾದವನಿಗೆ ಮತ್ತೀಗ ಆಕೆಯ ಮಗಳೇ ಬೇಕಂತೆ

ಬುಧವಾರ, 17 ಆಗಸ್ಟ್ 2016 (14:45 IST)
ಕಳೆದ ಕೆಲ ವಾರಗಳ ಹಿಂದೆ ಒಬ್ಬ ಮಹಿಳೆ ಮತ್ತು ಆಕೆಯ ಅಳಿಯನ ನಡುವಿನ ಪ್ರೇಮಕಥೆ ಸಾಕಷ್ಟು ಸುದ್ದಿ ಮಾಡಿತ್ತು. ಮತ್ತೀಗ ಈ ಅಸಾಮಾನ್ಯ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್ ಕಂಡು ಬಂದಿದೆ. ಅವರಿಬ್ಬರಿಗೂ ತಮ್ಮ ತಪ್ಪಿನ ಅರಿವಾಗಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದೆ ವಿವಾಹವಾಗಿದ್ದ ಬಿಹಾರದ ಮಧೇಪುರ ಜಿಲ್ಲೆಯ ಪುರೈನಿ ನಿವಾಸಿ 22 ವರ್ಷದ ಸೂರಜ್ ಮಹ್ತೊ ಮತ್ತು 42 ವರ್ಷದ ಆಶಾ ದೇವಿ ತಮ್ಮ ಮದುವೆಯನ್ನು ಮುರಿದುಕೊಳ್ಳಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ತಪ್ಪಿನ ಅರಿವಾಗಿದೆ, ನಾವು ಮರಳಿ ತಮ್ಮ ತಮ್ಮ ಸಂಗಾತಿಗಳನ್ನು ಸೇರಲು ಬಯಸುತ್ತೇವೆ ಎಂದು ಅವರಿಬ್ಬರು ಪಶ್ಚಾತಾಪ ವ್ಯಕ್ತ ಪಡಿಸಿದ್ದಾರೆ. 
 
ಘಟನೆ ಹಿನ್ನೆಲೆ: 
 
ಆಶಾದೇವಿ ಮಗಳ ಜತೆ ಸೂರಜ್ ಮೆಹ್ತೋಗೆ ಮದುವೆಯಾಗಿತ್ತು. ಅಳಿಯನಿಗೆ ಆರೋಗ್ಯ ಕೆಟ್ಟಿದೆ ಎಂದು ಒಮ್ಮೆ ಮಗಳ ಮನೆಗೆ ಹೋಗಿದ್ದ ಅತ್ತೆಗೆ ಆತನ ಮೇಲೆ ಪ್ರೀತಿ ಹುಟ್ಟಿ ಬಿಟ್ಟಿದೆ. ಆತನ ಸ್ಥಿತಿ ಏನೂ ಪ್ರತ್ಯೇಕವಾಗಿರಲಿಲ್ಲ. ಮನೆಗೆ ಹಿಂತಿರುಗಿದ ಆಶಾದೇವಿ ಅಳಿಯನ ಜತೆ ಪೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡ ತೊಡಗಿದಳು. 
 
ಅವರಿಬ್ಬರಿಗೂ ಇದು ಸರಿಯಲ್ಲ ಎಂದು ಅರ್ಥ ಮಾಡಿಸಲು ಸೂರಜ್ ಪತ್ನಿ ಲಲಿತಾ ಮತ್ತು ಗ್ರಾಮಸ್ಥರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು.  ಬೇರೆ ದಾರಿ ಇಲ್ಲದೇ ಗ್ರಾಮ ಪಂಚಾಯತಿ ಮದುವೆಯಾಗಿರೆಂದು ಅನುಮತಿ ಕೊಟ್ಟಿತು. ಬಳಿಕ ಅವರಿಬ್ಬರು ಒಟ್ಟಿಗೆ ವಾಸಿಸತೊಡಗಿದರು.
 
ಸೂರಜ್ ಪತ್ನಿ ದೆಹಲಿಗೆ ಹೋಗಿ ತಂದೆಯ ಆಶ್ರಯದಲ್ಲಿ ಜೀವನ ನಡೆಸ ಹತ್ತಿದಳು. 
 
ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರಿಗೆ ಹಿಡಿದ ಪ್ರೇಮದ ಹುಚ್ಚು ಇಳಿದು ಬಿಟ್ಟಿದೆ. ನಮ್ಮಿಬ್ಬರಿಗೂ ತಪ್ಪಿನ ಅರಿವಾಗಿದೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೆಂದೂ ನಾನು ಆಶಾದೇವಿಯವರನ್ನು ಪತ್ನಿ ರೂಪದಲ್ಲಿ ನೋಡಲಾರೆ. ಅತ್ತೆ ಎಂಬ ಗೌರವದಿಂದ ನೋಡಲು ಪ್ರಾರಂಭಿಸಿದ್ದೇನೆ. ನನ್ನ ಪತ್ನಿ ಲಲಿತಾಳ ಮನವೊಲಿಸಿ ಆಕೆಯ ಜತೆ ಬದುಕುವುದು ನನ್ನ ಆಶೆ ಎಂದು ಸೂರಜ್ ಹೇಳಿದ್ದಾನೆ.
 
ಆಶಾದೇವಿ ಕೂಡ ಆತ ಕೇವಲ ನನ್ನ ಅಳಿಯ ಅಷ್ಟೇ, ಆದಷ್ಟು ಬೇಗ ನನ್ನ ಪತಿ ಬಳಿ ಮರಳಲು ಬಯಸಿದ್ದೇನೆ. ನಾವು ಮಾಡಿದ್ದು ಘೋರ ತಪ್ಪು ಎಂದು ಪಶ್ಚಾತಾಪವನ್ನು ತೋಡಿಕೊಂಡಿದ್ದಾಳೆ. 

ವೆಬ್ದುನಿಯಾವನ್ನು ಓದಿ